ಹುಬ್ಬಳ್ಳಿ: ತಿಂಗಳ ಬಾಡಿಗೆಯಲ್ಲಿ ವಿನಾಯಿತಿ ನೀಡುವಂತೆ ಕೋರಿ ಅಂಗಡಿಗಳ ಪರವಾನಿಗೆದಾರರು ಸಾರಿಗೆ ಸಂಸ್ಥಗೆ ಮನವಿ ಸಲ್ಲಿಸಿದ್ದು ಅದನ್ನು ಪರಿಗಣಿಸಿ ಬಾಡಿಗೆಯಲ್ಲಿ ವಿನಾಯಿತಿ ನೀಡಲಾಗಿದೆ ಎಂದು ಇಲ್ಲಿನ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ.
ಲಾಕ್ಡೌನ್ ಅವಧಿಯಲ್ಲಿ ಬಸ್ ನಿಲ್ದಾಣಗಳಲ್ಲಿರುವ ಎಲ್ಲಾ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿದ್ದರಿಂದ ಯಾವುದೇ ವ್ಯಾಪಾರ ವಹಿವಾಟು ನಡೆಸಲು ಸಾಧ್ಯವಾಗಿರಲಿಲ್ಲ. ನಂತರದ ಅವಧಿಯಲ್ಲಿ ಅಂಗಡಿಗಳನ್ನು ತೆರೆದಿದ್ದರೂ ಸಹ ಪ್ರಯಾಣಿಕರ ಕೊರತೆಯಿಂದ ವ್ಯಾಪಾರ-ವಹಿವಾಟು ಹೇಳಿಕೊಳ್ಳುವಷ್ಟು ಆಗಿರಲಿಲ್ಲ. ಹೀಗಾಗಿ ಸಂಸ್ಥೆಗೆ ತುಂಬಬೇಕಾದ ಮಾಸಿಕ ಪರವಾನಿಗೆ ಶುಲ್ಕ (ತಿಂಗಳ ಬಾಡಿಗೆ ಹಣ) ವನ್ನು ಪಾವತಿಸಲು ತೊಂದರೆಯಾಗಿದ್ದು ತಿಂಗಳ ಬಾಡಿಗೆಯಲ್ಲಿ ವಿನಾಯಿತಿ ನೀಡುವಂತೆ ಕೋರಿ ಅಂಗಡಿಗಳ ಪರವಾನಿಗೆದಾರರು ಸಂಸ್ಥಗೆ ಮನವಿ ಸಲ್ಲಿಸಿದ್ದರು.
ಅದನ್ನು ಸಹಾನುಭೂತಿಯಿಂದ ಪರಿಗಣಿಸಿ ಮಾನವೀಯತೆ ದೃಷ್ಟಿಯಿಂದ ಮಾ. 22 ರಿಂದ ಮೇ 31ರ ವರೆಗೆ ಮತ್ತು ಜುಲೈ ತಿಂಗಳ ಅವಧಿಗೆ ಸಂಪೂರ್ಣ ಬಾಡಿಗೆ ವಿನಾಯಿತಿ ನೀಡಲಾಗಿದೆ. ಜೂನ್ ತಿಂಗಳು ಶೇ. 90ರಷ್ಟು ಮತ್ತು ಆಗಸ್ಟ್ ತಿಂಗಳಲ್ಲಿ ಶೇ. 85ರಷ್ಟು ಬಾಡಿಗೆ ವಿನಾಯಿತಿ ನೀಡಲಾಗಿದೆ ಎಂದು ರಾಮನಗೌಡರ ತಿಳಿಸಿದ್ದಾರೆ.
ಹುಬ್ಬಳ್ಳಿ ವಿಭಾಗದ ವ್ಯಾಪ್ತಿಯಲ್ಲಿ ಹುಬ್ಬಳ್ಳಿ ಹಳೆ ಬಸ್ ನಿಲ್ದಾಣ, ಗೋಕುಲ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣ, ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣ, ಕುಂದಗೋಳ, ಸಂಶಿ, ತಡಸ, ಕಲಘಟಗಿ, ಹೆಬಸೂರು, ನವಲಗುಂದ ಮತ್ತು ಅಣ್ಣಿಗೇರಿ ಬಸ್ ನಿಲ್ದಾಣಗಳಲ್ಲಿ ಒಟ್ಟು 88 ವಾಣಿಜ್ಯ ಮಳಿಗೆಗಳಿವೆ. ಮಾರ್ಚ್ 22ರಿಂದ ಆಗಸ್ಟ್ ವರೆಗೆ ತಿಂಗಳುವಾರು ವಿನಾಯಿತಿ ನೀಡಿರುವ ಪರವಾನಿಗೆ ಶುಲ್ಕದ (ಬಾಡಿಗೆ) ವಿವರಗಳು ಕೆಳಕಂಡಂತಿರುತ್ತವೆ.
ತಿಂಗಳು ವಿನಾಯಿತಿ ಮೊತ್ತ (ಲಕ್ಷ ರೂ.)
- ಮಾ. 12.04 ಲಕ್ಷ
- ಏ. 35.83 ಲಕ್ಷ
- ಮೇ 35.83 ಲಕ್ಷ
- ಜೂ. 33.45 ಲಕ್ಷ
- ಜು. 37.19 ಲಕ್ಷ
- ಆ. 35.52 ಲಕ್ಷ
- ಒಟ್ಟು 188.37. ಲಕ್ಷ