ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ನಗರ ಕಮಿಷನರೇಟ್ ಪೊಲೀಸರಿಗೆ ಟ್ರಾಫಿಕ್ ನಿರ್ವಹಣೆಯೇ ದೊಡ್ಡ ತಲೆನೋವಾಗಿದೆ. ಕ್ರೈಂ ಪ್ರಕರಣಗಳನ್ನು ಬೇಧಿಸುವುದಕ್ಕಿಂತ ಟ್ರಾಫಿಕ್ ನಿರ್ವಹಣೆ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ ಎನ್ನಲಾಗಿದೆ.
ವಾಣಿಜ್ಯನಗರಿ ಹುಬ್ಬಳ್ಳಿಯನ್ನು ಸ್ಮಾರ್ಟ್ ಮಾಡಲು ಬಂದಿರುವ ಸ್ಮಾರ್ಟ್ ಸಿಟಿ ಯೋಜನೆ ಹಾಗೂ ಫ್ಲೈಓವರ್ ಕಾಮಗಾರಿಯಿಂದ ದಿನಕ್ಕೊಂದು ಮಾರ್ಗ ಬದಲಾವಣೆ ಹಿನ್ನೆಲೆ ಪೊಲೀಸರಿಗೆ ಟ್ರಾಫಿಕ್ ನಿರ್ವಹಣೆ ಮಾಡುವುದೇ ದೊಡ್ಡ ತಲೆನೋವಾಗಿದೆ. ಕಿಕ್ಕಿರಿದ ರಸ್ತೆಗಳ ಮಧ್ಯೆ ವಾಹನ ಸವಾರರು ಪರದಾಡುತ್ತಿದ್ದು, ಇದನ್ನು ನಿರ್ವಹಿಸುವ ಜವಾಬ್ದಾರಿ ಪೊಲೀಸರದ್ದಾಗಿದೆ.
ಒಂದು ದಿನ ಗೋಕುಲ ರೋಡ್ ಕಾಮಗಾರಿ ಆರಂಭವಿದ್ದರೆ ಮತ್ತೊಂದು ದಿನ ಕಾಮಗಾರಿ ನಿಲ್ಲಿಸಲಾಗಿರುತ್ತದೆ. ಅಲ್ಲದೇ ಕೆಲವು ದಿನ ಐಟಿ ಪಾರ್ಕ್ ಮುಂದಿನ ರಸ್ತೆಯಲ್ಲಿ ಕಾಮಗಾರಿ ಆರಂಭವಾಗಿದ್ರೆ, ಕೆಲವು ದಿನ ಬಂದ್ ಆಗಿರುತ್ತದೆ. ಇದರಿಂದ ಜನ ಸಾಮಾನ್ಯರು ಸಹ ಮಾರ್ಗ ಬದಲಾವಣೆ ಗೊಂದಲಕ್ಕೆ ಸಿಲುಕಿ ಪರದಾಡುವಂತಾಗಿದೆ.
ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಕ್ರೈಂ ಪ್ರಕರಣಗಳು ಹೆಚ್ಚುತ್ತಿವೆ. ಅಲ್ಲದೇ, ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಜವಾಬ್ದಾರಿ ಜೊತೆಗೆ ಈಗ ಟ್ರಾಫಿಕ್ ನಿರ್ವಹಣೆ ಸಹ ಪೊಲೀಸ್ ಇಲಾಖೆಗೆ ತಲೆನೋವಾಗಿದೆ. ಫ್ಲೈಓವರ್ ಕಾಮಗಾರಿ ಹಾಗೂ ಸ್ಮಾರ್ಟ್ ಸಿಟಿ ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿ ವರ್ಗ ಹಾಗೂ ಗುತ್ತಿಗೆದಾರರು ಸರಿಯಾದ ರೀತಿ ಮಾಹಿತಿ ರವಾನೆ ಮಾಡದಿರುವುದರಿಂದ ಜನರು ಓಡಾಡಲು ಹರಸಾಹಸ ಪಡುವಂತಾಗಿದೆ.
ಮಾಹಿತಿ ಕೊರತೆಯಿಂದ ಜನರು ಹಾಗೂ ಪೊಲೀಸ್ ಇಲಾಖೆ ಸಮಸ್ಯೆಗಳನ್ನು ಅನುಭವಿಸುವಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಜರುಗಿಸಿ ಕಾಮಗಾರಿ ನಡೆಯುವ ಸ್ಥಳ ಹಾಗೂ ಮಾರ್ಗ ಬದಲಾವಣೆ ಬಗ್ಗೆ ಮಾಹಿತಿ ನೀಡಲಿ ಎಂಬುವುದು ಸಾರ್ವಜನಿಕರ ಆಗ್ರಹ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ