ಹುಬ್ಬಳ್ಳಿ: ರಾಜ್ಯದ ಎರಡು ಸ್ಮಾರ್ಟ್ ಸಿಟಿಗಳಾದ ಹುಬ್ಬಳ್ಳಿ ಮತ್ತು ದಾವಣಗೆರೆ ನಡುವೆ ನಿಯಮಿತವಾಗಿ ಪ್ರಯಾಣ ಮಾಡುವ ಸಾರ್ವಜನಿಕರಿಗೆ ಮತ್ತಷ್ಟು ಶೀಘ್ರ, ಆರಾಮದಾಯಕ ಪ್ರಯಾಣದ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವೋಲ್ವೊ ಎಸಿ ಬಸ್ ಸಂಚಾರವನ್ನು ಸೋಮವಾರದಿಂದ ಆರಂಭಿಸಲಾಗುತ್ತದೆ ಈ ಬಸ್ಸುಗಳು ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ವಾಕರಾರಸಾ ಸಂಸ್ಥೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ.
ಈ ಮೊದಲು ಹುಬ್ಬಳ್ಳಿಯಿಂದ ಬೆಳಗಾವಿ, ಗದಗ, ಬಾಗಲಕೋಟೆ, ವಿಜಯಪುರ ನಡುವೆ ತಡೆರಹಿತ ವೇಗದೂತ ಬಸ್ಸುಗಳು ಸಂಚರಿಸುತ್ತಿದ್ದವು. ಸಾರ್ವಜನಿಕರ ಬೇಡಿಕೆಯ ಮೇರೆಗೆ ಇತ್ತೀಚೆಗೆ ಹುಬ್ಬಳ್ಳಿಯಿಂದ ಹಾವೇರಿ ಮತ್ತು ರಾಣೆಬೆನ್ನೂರಿಗೆ ತಡೆರಹಿತ ವೇಗದೂತ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಸಧ್ಯ ಹುಬ್ಬಳ್ಳಿ- ಬೆಳಗಾವಿ ನಡುವೆ ಮಾತ್ರ ವೋಲ್ವೋ ಎಸಿ ಬಸ್ ಗಳು ಸಂಚರಿಸುತ್ತಿವೆ. ಈ ಬಸ್ಸುಗಳು ಮಾರ್ಗ ಮಧ್ಯದ ಊರುಗಳ ಒಳಗೆ ಹೋಗದೆ, ನೇರವಾಗಿ ಬೈಪಾಸ್ ಮೂಲಕ ಹೆದ್ದಾರಿಯಲ್ಲಿ ಸಂಚರಿಸುವುದರಿಂದ ಪ್ರಯಾಣದ ಅವಧಿಯಲ್ಲಿ ಸಾಕಷ್ಟು ಉಳಿತಾಯವಾಗುತ್ತದೆ.
ಅದ್ದರಿಂದ ಇದೇ ಮಾದರಿಯಲ್ಲಿ ಹುಬ್ಬಳ್ಳಿಯಿಂದ ಅಕ್ಕಪಕ್ಕದ ಇತರೆ ಜಿಲ್ಲೆಗಳಿಗೂ ಸಹ ವೋಲ್ವೋ ಬಸ್ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಸಾರ್ವಜನಿಕರಿಂದ ನಿರಂತರವಾಗಿ ಬೇಡಿಕೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಎರಡು ಸ್ಮಾರ್ಟ್ ಸಿಟಿಗಳಾದ ಹುಬ್ಬಳ್ಳಿ ಮತ್ತು ದಾವಣಗೆರೆ ನಡುವೆ ವೋಲ್ವೊ ಎಸಿ ಬಸ್ ಸಂಚಾರ ಆರಂಭಿಸಲಾಗುತ್ತಿದೆ.
ಮಾ.22ರಂದು ಬೆಳಿಗ್ಗೆ 11-30 ಕ್ಕೆ ಗೋಕುಲ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣದಲ್ಲಿ ಈ ಬಸ್ಸುಗಳಿಗೆ ವಾಕರಾರಸಾ ಸಂಸ್ಥೆಯ ಅಧ್ಯಕ್ಷ ವಿ.ಎಸ್. ಪಾಟೀಲ್ ಚಾಲನೆ ನೀಡಲಿದ್ದಾರೆ.
ಮಂಡಳಿ ನಿರ್ದೇಶಕರುಗಳಾದ ಸಿದ್ದಲಿಂಗೇಶ್ವರ ಮಠದ, ಅಶೋಕ ಮಳಗಿ, ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಎಂದು ವಾಕರಸಾಸಂಸ್ಥೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ