ಹುಬ್ಬಳ್ಳಿ: ಇಡೀ ದೇಶವೇ ಕೊರೊನಾ ಹೊಡೆತಕ್ಕೆ ನಲುಗಿದ್ದು, ಈವರೆಗೆ ಔಷಧ ಕೂಡ ದೊರೆಯದೇ ಪರಿತಪಿಸುವಂತಾಗಿದೆ . ಈ ಹಿನ್ನೆಲೆ, ಕೊರೊನಾ ವೈರಸ್ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳೇ ಮುಖ್ಯವಾಗಿದ್ದು, ನಗರದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಸಾರ್ವಜನಿಕರ ಅನುಕೂಲಕ್ಕಾಗಿ ಕಡಿಮೆ ಬೆಲೆಯಲ್ಲಿ ಸ್ಯಾನಿಟೈಸರ್ ಉಪಕರಣವನ್ನು ಕಂಡು ಹಿಡಿದಿದ್ದಾರೆ.
ಹುಬ್ಬಳ್ಳಿ ಈಶ್ವರನಗರದ ನಿವಾಸಿ ಕಿರಣ ಗಂಗಾವತಿ ಎಂಬುವವರು ಈ ಉಪಕರಣ ಕಂಡು ಹಿಡಿದವರಾಗಿದ್ದಾರೆ. ಇವರು ಜನರ ಆರೋಗ್ಯದ ದೃಷ್ಟಿಯಿಂದ ಈ ಯಂತ್ರವನ್ನು ತಯಾರು ಮಾಡಿದ್ದು, ಮನೆಯಿಂದ ಹೊರಗಡೆ ಹೋಗುವ ಜನರು ಪದೇ ಪದೆ ಸ್ಯಾನಿಟೈಸರ್ ಬಳಸುವುದು ಕಷ್ಟ, ಅಲ್ಲದೇ ಈ ಸ್ಯಾನಿಟೈಸರ್ಗಳನ್ನು ಜೇಬಿನಲ್ಲಿ ಇಟ್ಟುಕೊಂಡು ಓಡಾಡುವುದು ಕಷ್ಟ ಎಂಬುದನ್ನ ಅರಿತ ಕಿರಣ, ಮನೆಗೆ ಬರುವ ಮುನ್ನ ಕಡ್ಡಾಯವಾಗಿ ಕೈಗೆ ಸ್ಯಾನಿಟೈಸರ್ ಬಳಕೆ ಮಾಡಿಕೊಂಡೇ ಬರಬೇಕು ಎಂಬ ಉದ್ದೇಶದಿಂದ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಬಳಸಿ ಸ್ಯಾನಿಟೈಸರ್ ಉಪಕರಣವನ್ನು ತಯಾರಿಸಿದ್ದಾರೆ.
ಇನ್ನು ಈ ಉಪಕರಣವನ್ನು ಮನೆ ಬಾಗಿಲಿಗೆ ಹಾಕಿದರೆ ಸಾಕು ಮನೆಯಿಂದ ಹೊರ ಹೋಗಿ ಬರುವವರು ಮೊದಲು ಸ್ಯಾನಿಟೈಸರ್ ಬಳಕೆ ಮಾಡಿ ಒಳಗಡೆ ಪ್ರವೇಶ ಮಾಡುವಂತೆ ಜಾಗೃತಿ ಮೂಡಿಸುತ್ತಿರುವ ಕಿರಣ, ಹೊರಗಡೆ ಓಡಾಡಿ ಬರುವ ಜನರ ಜೊತೆಗೆ ಮನೆಯಲ್ಲಿನ ಸದಸ್ಯರ ಆರೋಗ್ಯವನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ.