ಹುಬ್ಬಳ್ಳಿ: ಕನ್ನಡ ಚಿತ್ರರಂಗದಲ್ಲಿ ಮಿಂಚಬೇಕು ಅಂದರೆ ನಟನೆ ಜೊತೆಗೆ ಗಾಡ್ ಫಾದರ್ ಇರಲೇಬೇಕು ಎಂಬ ಮಾತಿದೆ. ಆದರೆ ಯಾರ ಸಹಾಯವಿಲ್ಲದೆ ತಮ್ಮ ವಿಭಿನ್ನ ನಟನೆಯ ಮೂಲಕ ಸಹೋದರಿಯರು ಚಂದನವನದಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ.
ನಟನೆ ಮತ್ತು ನೃತ್ಯದಲ್ಲಿ ತೊಡಗಿಸಿಕೊಂಡ ಈ ಇಬ್ಬರು ಸಹೋದರಿಯರ ಹೆಸರು ಅಕ್ಷತಾ ಹಾಗೂ ಅನಿತಾ. ಮೂಲತಃ ಹುಬ್ಬಳ್ಳಿ ನಿವಾಸಿ ಯಲ್ಲಪ್ಪ ಲದ್ವಾ ಪುತ್ರಿಯರು. ಈ ಜೋಡಿ ಇದೀಗ ಚಂದನವನದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ. ಅಕ್ಷತಾ ಕನ್ನಡ ಗಿಣಿರಾಮ ಸೇರಿದಂತೆ ಕಿರುತೆರೆ ಜೊತೆಗೆ ಮನೆ ತುಂಬಾ ಬರೀ ಜಂಭ, ಗೊಂದಲಪುರ, ತಾಯಿಗೆ ತಕ್ಕ ಮಗ, ಚಂದ್ರಕಲಾ, ಜೊಲ್ ಪಾರ್ಟಿ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ತೆಲುಗಿನ ಕ್ಲಿಕ್ ಎಂಬ ಚಿತ್ರದಲ್ಲಿ ನಟಿಸಿ ತೆಲಗು ಫಿಲ್ಮ್ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ತಮ್ಮ ತಂದೆಯ ನಟನಾ ಶೈಲಿಯನ್ನು ನೋಡುತ್ತಾ ನಟನೆ ಕಲಿತಿರುವ ಇವರಿಗೆ ದಿನದಿಂದ ದಿನಕ್ಕೆ ಅವಕಾಶಗಳು ಹೆಚ್ಚುತ್ತಿರುದಕ್ಕೆ ತಂದೆ ಫುಲ್ ಖುಷ್ ಆಗಿದ್ದಾರೆ. ಸುಮಾರು ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ ನೀಡಿರುವ ಇವರು ಚಿಕ್ಕ ವಯಸ್ಸಿನಲ್ಲೇ ನಟನೆ ಆಸೆಯನ್ನು ಹೊತ್ತಿಕೊಂಡಿದ್ದರು. ಇವರಿಗೆ ಕುಟುಂಬಸ್ಥರು ಸಹ ಸಾಥ್ ನೀಡಿ ತಮ್ಮ ಮಕ್ಕಳು ಕನ್ನಡ ಅಷ್ಟೇ ಅಲ್ಲದೇ ಎಲ್ಲಾ ಚಿತ್ರರಂಗದಲ್ಲಿ ಮಿಂಚಬೇಕು ಎಂದು ಎಲ್ಲಾ ರೀತಿ ಸಪೋರ್ಟ್ ಮಾಡಿದ್ದಾರೆ.