ಹುಬ್ಬಳ್ಳಿ: ಕಳೆದ ಮೂರು ತಿಂಗಳ ಹಿಂದೆ ಸುರಿದ ಮಳೆಗೆ ನಗರದ ರಾಜಕಾಲುವೆಗಳು, ಒಳಚರಂಡಿಗಳು ಒಡೆದಿದ್ದು, ಇವುಗಳ ದುರಸ್ಥಿಗೆ ಜಿಲ್ಲಾಡಳಿತವಾಗಲಿ,ಮಹಾನಗರ ಪಾಲಿಕೆಯಾಗಲಿ ಮುಂದಾಗಿಲ್ಲ. ಇದರ ವಿರುದ್ಧ ಜನ ಹಿಡಿಶಾಪ ಹಾಕುತ್ತಿದ್ದಾರೆ.
ವಾಣಿಜ್ಯ ನಗರಿಯಲ್ಲಿ ಸುರಿದ ಮಳೆಯ ಸಾಕಷ್ಟು ಆವಾಂತರ ಸೃಷ್ಟಿಸಿತ್ತು. ಕಳೆದ ಮೂರು ತಿಂಗಳ ಹಿಂದೆ ಸುರಿದ ಮಳೆಗೆ ರಾಜಕಾಲುವೆ ಹಾಗೂ ಒಳಚರಂಡಿಗಳ ಒಡೆದಿದ್ದು, ಅಲ್ಲಿನ ಪಕ್ಕದ ನಿವಾಸಿಗಳು ಭಯದಲ್ಲಿಯೇ ಕಾಲ ಕಳೆಯುವಂತಾಗಿತ್ತು.
ಧಾರಾಕಾರ ಮಳೆಗೆ ವಾರ್ಡ್ ನಂಬರ್ 41ರ ಸಿದ್ದಲಿಂಗೇಶ್ವರ ಕಾಲೋನಿಯ ರಾಜಕಾಲುವೆ ಕೊಚ್ಚಿ ಹೋಗಿದೆ. ಇದರಿಂದ ಇಲ್ಲಿನ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ರಾಜಕಾಲುವೆ ಪಕ್ಕದ ರಸ್ತೆಯು ಕುಸಿದು ಬಿದ್ದು ರಸ್ತೆಯಲ್ಲಿ ನಡೆದಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಗೆ ಅಡ್ಡಲಾಗಿ ಒಂದು ಬ್ಯಾರಿಕೇಡ್ ಹಾಕಿದ್ದನ್ನು ಬಿಟ್ಟರೆ ರಸ್ತೆ ದುರಸ್ಥಿ ಹಾಗೂ ಕಾಲುವೆ ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳು ಮುಂದಾಗಿಲ್ಲ ಎಂದು ಸ್ಥಳಿಯರು ಆರೋಪಿಸುತ್ತಿದ್ದಾರೆ.
ರಸ್ತೆ ಅರ್ಧ ಭಾಗ ಕೊಚ್ಚಿ ಹೋಗಿದೆ. ಇದೇ ರಸ್ತೆಯಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಸೇರಿ ವಾಹನ ಸವಾರರು ಓಡಾಡುತ್ತಾರೆ. ಈ ಬಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಕೂಡಲೇ ಕಾಲುವೆ ದುರಸ್ಥಿ ಮಾಡುವಂತೆ ಸಾರ್ವಜನಿಕರು ಮನವಿ ಸಲ್ಲಿಸಿದ್ದಾರೆ. ಆದರೆ, ಈವರೆಗೂ ಯಾರೊಬ್ಬರು ಇತ್ತ ಗಮನಹರಿಸಿಲ್ಲ ಎಂಬುದು ಇಲ್ಲಿನ ಜನರ ಆರೋಪವಾಗಿದೆ.