ಹುಬ್ಬಳ್ಳಿ: ಹುಬ್ಬಳ್ಳಿಯ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆಯಲ್ಲಿ ಸ್ಟ್ರೆಚರ್ ವ್ಯವಸ್ಥೆ ಕಲ್ಪಿಸದ ಕಾರಣ ಆಕ್ಸಿಜನ್ ಅಳವಡಿಸಿದ್ದ ಅನಾರೋಗ್ಯ ಪೀಡಿತ ಮಗುವನ್ನು ತಂದೆಯೇ ಹೊತ್ತುಕೊಂಡು ಹೋಗಿ ಚಿಕಿತ್ಸೆ ನೀಡಿಸಿರುವ ಘಟನೆ ನಡೆದಿದೆ.
ಹೌದು, ನಗರದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಕೊರೊನಾ ಹೋರಾಟದಲ್ಲಿ ಅಮೋಘವಾದ ಸೇವೆಗೆ ಕೈ ಜೋಡಿಸಿದ್ದು, ಉತ್ತರ ಕರ್ನಾಟಕದ ಧನ್ವಂತರಿ ಎಂಬುವಂತ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ಇಲ್ಲಿನ ಸಿಬ್ಬಂದಿಯ ನಿಷ್ಕಾಳಜಿಯಿಂದ ಕಿಮ್ಸ್ ಆಸ್ಪತ್ರೆಗೆ ಕಪ್ಪು ಚುಕ್ಕೆ ಇಟ್ಟಂತಾಗಿದೆ. ಇನ್ನೂ ಸಿಬ್ಬಂದಿ ಏನೂ ಗೊತ್ತಿರದ ತಂದೆಯ ಕೈಯಲ್ಲಿ ಆಕ್ಸಿಜನ್ ಅಳವಡಿಸಿರುವ ಮಗುವನ್ನು ಕೊಟ್ಟಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಕಿಮ್ಸ್ ಸಿಬ್ಬಂದಿಯ ನಿಷ್ಕಾಳಜಿಯಿಂದ ಸಾರ್ವಜನಿಕರು ಚಿಕಿತ್ಸೆಗೆ ತೆರಳಲೂ ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಹಾಗೂ ಕಿಮ್ಸ್ ನಿರ್ದೇಶಕರು ಎಚ್ಚೆತ್ತುಕೊಂಡ ಅವ್ಯವಸ್ಥೆ ಸರಿಪಡಿಸಬೇಕು ಎಂಬುವುದು ಸಾರ್ವಜನಿಕರ ಒತ್ತಾಯವಾಗಿದೆ.