ಹುಬ್ಬಳ್ಳಿ: ಹೂಡಿಕೆದಾರರ ಸಮಾವೇಶಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಯುವಕರಿಗೆ ಉದ್ಯೋಗ ಸಿಗಲಿ ಎಂಬ ದೃಷ್ಟಿಯಿಂದ ಇನ್ವೆಸ್ಟ್ ಕರ್ನಾಟಕ ಸಮಾವೇಶವನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಬಹಳಷ್ಟು ಜನ ಹೂಡಿಕೆದಾರರು ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಸದಾನಂದಗೌಡ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವರಾದ ಜಗದೀಶ ಶೆಟ್ಟರ, ಸುರೇಶ ಅಂಗಡಿ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಸಿ.ಎಂ. ನಿಂಬಣ್ಣವರ್, ಅಮೃತ್ ದೇಸಾಯಿ, ಶಂಕರಪಾಟೀಲ ಮುನೇನಕೊಪ್ಪ, ಸಂಸದ ಭಗವಂತ ಖೂಬಾ ,ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ವಿಆರ್ಎಲ್ ಸಮೂಹ ಸಂಸ್ಥೆಗಳ ಸಿಎಂಡಿ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಭಾಗಿಯಾಗಿದ್ದಾರೆ.
ನಗರದಲ್ಲಿ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಭಾಗವಹಿಸುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬಿಎಸ್ವೈ, ಈ ಸಮಾವೇಶದಲ್ಲಿ ರಾಜ್ಯ, ದೇಶ, ವಿದೇಶಗಳಲ್ಲಿನ ಉದ್ಯಮಿಗಳು ಭಾಗವಹಿಸುತ್ತಿದ್ದು, ಹಲವಾರು ಕಂಪನಿಗಳು ಹೂಡಿಕೆ ಮಾಡಲು ಸಿದ್ಧರಿದ್ದಾರೆ. ಈ ಹಿನ್ನೆಲೆಯಲ್ಲಿ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸಿಗಲಿವೆ. ಈ ಬಗ್ಗೆ ಹೊಸ ಯೋಜನೆ ಘೋಷಣೆ ಮಾಡಲಾಗುವುದು ಎಂದರು. ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಉದ್ಯೋಗಾವಕಾಶ ಸೃಷ್ಟಿಸುವ ಹಿನ್ನೆಲೆಯಲ್ಲಿ ಹೂಡಿಕೆದಾರರ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಉದ್ದಿಮೆ, ಕೈಗಾರಿಕೆಗಳನ್ನು ಸೆಳೆಯುವ ಪ್ರಯತ್ನ ಇದಾಗಿದ್ದು, 700ಕ್ಕೂ ಹೆಚ್ಚು ಹೂಡಿಕೆದಾರರು ಭಾಗಿಯಾಗಿದ್ದಾರೆ.
ಕಾರು ಅಪಘಾತ ಗೊತ್ತಿಲ್ಲ:
ಬಳ್ಳಾರಿಯಲ್ಲಿ ನಡೆದ ಕಾರು ಅಪಘಾತದ ಬಗ್ಗೆ ನನಗೆ ಗೊತ್ತಿಲ್ಲ. ಆ ಬಗ್ಗೆ ನಿಮ್ಮಿಂದಾನೇ ಕೇಳುತ್ತಿರೋದು ಎಂದು ಸಿಎಂ ಹೇಳಿದ್ರು. ಈ ವೇಳೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಎಫ್ಐಆರ್ ಆಗಿದ್ದು, ತನಿಖೆ ಆರಂಭಿಸಲಾಗುವುದು ಎಂದು ತಿಳಿಸಿದ್ರು.