ಹುಬ್ಬಳ್ಳಿ: ವಾಣಿಜ್ಯ ನಗರಿಯ ಬಾಲಕಿಯೋರ್ವಳು ಈಗ ತನ್ನ ಸಾಹಸ ಕ್ರೀಡೆಯ ಮೂಲಕ ರಾಷ್ಟ್ರ ಮಟ್ಟದಲ್ಲಿ ಮಿಂಚಲು ಸಜ್ಜಾಗಿದ್ದಾಳೆ. ಹಗ್ಗದ ಮಲ್ಲಕಂಬದಲ್ಲಿ ತರಬೇತಿ ಪಡೆದು ರಾಜ್ಯ ಮಟ್ಟದಲ್ಲಿ ಬೆಳ್ಳಿ ಪದಕ ಪಡೆದು ಇದೀಗ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾಳೆ.
ನವನಗರದ ರೋಟರಿ ಸ್ಕೂಲ್‌ದಲ್ಲಿ 5 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸವಿತಾ ಎಂಬ ಬಾಲಕಿ ಸಾಧನೆ ಮಾಡಿದ್ದಾಳೆ. ಬಾಲಕಿಯ ತಂದೆ ಸುರೇಶ್ ಕರೆನ್ನವರ ಅದೇ ಶಾಲೆಯಲ್ಲಿ ಕಳೆದ 8 ವರ್ಷಗಳಿಂದ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಈಗ ಮಗಳು ಹಗ್ಗದ ಮಲ್ಲಕಂಬದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿದ್ದಕ್ಕೆ ಪಾಲಕರು ಮತ್ತು ತರಬೇತುದಾರ ಸಂತಸ ವ್ಯಕ್ತಪಡಿಸಿದ್ದಾರೆ.
ಬಡತನದಲ್ಲಿ ಜೀವನ ಸಾಗಿಸುತ್ತಿರುವ ಸೆಕ್ಯುರಿಟಿ ಗಾರ್ಡ್ ಮಗಳ ಸಾಧನೆ ಕಂಡ ಶಿಕ್ಷಕರು ಬಾಲಕಿಗೆ ಬೆನ್ನೆಲುಬಾಗಿ ನಿಂತು ಶಿಕ್ಷಣದ ಜೊತೆಗೆ ಹಗ್ಗ ಮಲ್ಲಕಂಬದ ತರಬೇತಿ ಪಡೆಯಲು ಸಹಾಯ ಮಾಡಿದ್ದಾರೆ.
ಇದೀಗ ಬಾಲಕಿ ಸೆ.26 ರಂದು ಮಧ್ಯಪ್ರದೇಶದ ಉಜ್ಜೈನಿನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಹಗ್ಗ ಮಲ್ಲಕಂಬ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾಳೆ. ಇದಕ್ಕಾಗಿ ಸವಿತಾ ತಯಾರಿ ನಡೆಸುತ್ತಿದ್ದು, ಹಗ್ಗದ ಮಲ್ಲಕಂಬದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ದೇಶ, ರಾಜ್ಯ ಮತ್ತು ಹುಬ್ಬಳ್ಳಿಯ ಕೀರ್ತಿಯನ್ನು ಹೆಚ್ಚಿಸಬೇಕೆನ್ನುವ ಗುರಿ ಹೊಂದಿದ್ದಾಳೆ.
ಬಾಲಕಿಯ ಸವಿತಾ ರಾಷ್ಟ್ರ ಮಟ್ಟದಲ್ಲೂ ಅತ್ಯುತ್ತಮ ಸಾಧನೆ ಮಾಡಲಿ. ಅವಳ ಭವಿಷ್ಯ ಮತ್ತಷ್ಟು ಉಜ್ವಲಿಸಲಿ ಎಂದು ಹಾರೈಸೋಣ..