ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಪ್ರಸಕ್ತ ಅಗಸ್ಟ್ ತಿಂಗಳಲ್ಲೇ ನಡೆಯುವುದು ಬಹುತೇಕ ಖಚಿತವಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿವೆ.
ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಶುಕ್ರವಾರ ಚುನಾವಣಾ ಆಯೋಗದೊಂದಿಗೆ ಚರ್ಚಿಸಿದ ನಂತರ ಎಲ್ಲಾ ಅವಶ್ಯಕ ಸಿದ್ಧತೆಗಳನ್ನು ಮಾಡಿಕೊಳ್ಳಲು ಪಾಲಿಕೆ ಆಯುಕ್ತರಿಗೆ ಆದೇಶ ನೀಡಿದ್ದಾರೆ. ಹಾಗಾಗಿ, ನಾಳೆ ಚುನಾವಣೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಪ್ರತಿ ಐದು ವಾರ್ಡ್ಗೊಂದರಂತೆ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ನೇಮಕ ಮಾಡಿ ಚುನಾವಣಾ ಆಯೋಗಕ್ಕೆ ಈಗಾಗಲೇ ತಿಳಿಸಲಾಗಿದೆ.
ಎಸ್‌ಸಿ ಮೀಸಲಾತಿ ಹಾಗೂ ವಾರ್ಡ್ ಮೀಸಲಾತಿಗೆ ಆಗಿರುವ ಅನ್ಯಾಯದ ಕುರಿತಂತೆ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಇಂದು ಧಾರವಾಡ ಹೈಕೋರ್ಟ್ನಲ್ಲಿ ನಡೆಯಲಿದೆ. ಆಯೋಗ ಮುಚ್ಚಿದ ಲಕೋಟೆಯಲ್ಲಿ ಚುನಾವಣಾ ಪ್ರಕ್ರಿಯೆ ಬಗ್ಗೆ ಹೈಕೋರ್ಟ್ಗೆ ವಿವರ ನೀಡಬೇಕಿದೆ. ಹೀಗಾಗಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರೇ ಸ್ವಯಂಪ್ರೇರಿತವಾಗಿ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿರುವುದರಿಂದ ತಡೆಯಾಜ್ಞೆ ನೀಡುವ ಸಾಧ್ಯತೆಯೂ ಕಡಿಮೆ.
ಪಾಲಿಕೆಗೆ ಕಳೆದ 28 ತಿಂಗಳಿಂದ ಚುನಾಯಿತ ಆಡಳಿತ ಮಂಡಳಿ ಇಲ್ಲದಿರುವುದರಿಂದ ಹಾಗೂ ಮತದಾರರ ಪಟ್ಟಿ ಪ್ರಕಟಗೊಂಡ (ಜುಲೈ 09) 45 ದಿನಗಳೊಳಗೆ ಚುನಾವಣೆ ನಡೆಸುವುದಾಗಿ ಈ ಹಿಂದೆಯೇ ಹೈಕೋರ್ಟ್ಗೆ ಆಯೋಗ ಹೇಳಿರುವುದರಿಂದ ಮತದಾನದ ದಿನಾಂಕ ನಿಶ್ಚಯಿಸಿಯೇ ಹೈಕೋರ್ಟ್ಗೆ ವಿವರ ನೀಡಲು ಚುನಾವಣಾ ಆಯೋಗ ಮುಂದಾಗಿದೆ.