ಧಾರವಾಡ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಗದ್ದುಗೆ ಹಿಡಿಯಲು ಕಾಂಗ್ರೆಸ್ ಮತ್ತು ಬಿಜೆಪಿ ತಂತ್ರ ಪ್ರತಿತಂತ್ರ ಹೆಣೆದಿವೆ. ಹು-ಧಾ ಮಹಾನಗರ ಪಾಲಿಕೆಯ 22ನೇ ಅವಧಿಗೆ ಮಹಾಪೌರ, ಉಪ ಮಹಾಪೌರ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದೆ. ಇಂದು ಬೆಳಗ್ಗೆ 9 ರಿಂದ 11 ಗಂಟೆವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. ಬೆಳಗಾವಿ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ.
ಸಾಮಾನ್ಯ ಮಹಿಳೆಗೆ ಮೇಯರ್ ಸ್ಥಾನ ಮೀಸಲು: ಧಾರವಾಡ ಪಾಲಿಕೆಯ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಭಾಭವನದಲ್ಲಿ ಚುನಾವಣೆ ನಡೆಯಲಿದ್ದು, ಮಧ್ಯಾಹ್ನ 1 ಗಂಟೆಗೆ ಸಭೆ ಆರಂಭ ಆಗುತ್ತದೆ. ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಉಪ ಮಹಾಪೌರ ಸ್ಥಾನಕ್ಕೆ ಸಾಮಾನ್ಯ ಮೀಸಲು ನಿಗದಿಯಾಗಿದೆ. ಒಟ್ಟು 82 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ 39 ಸದಸ್ಯರು, ಕಾಂಗ್ರೆಸ್ನ 33 ಸದಸ್ಯರು, ಎಐಎಂಐಎಂ 3, ಜೆಡಿಎಸ್ 1 ಹಾಗೂ 6 ಪಕ್ಷೇತರ ಸದಸ್ಯರಿದ್ದಾರೆ. ಸಂಸದ, ಶಾಸಕರು, ಪರಿಷತ್ ಸದಸ್ಯರು ಸೇರಿ 89 ಸದಸ್ಯರು ಮತಹಕ್ಕು ಹೊಂದಿದ್ದಾರೆ.
ಅಡ್ಡಮತದಾನ ಭಯದ ಹಿನ್ನೆಲೆ ಪಕ್ಷಗಳಿಂದ ವಿಪ್ ಜಾರಿ: ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಪಾಲಿಕೆ ಸದಸ್ಯರು ಅಡ್ಡಮತದಾನ ಮಾಡಬಹುದು ಎಂಬ ಕಾರಣಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಅಧ್ಯಕ್ಷರು ವಿಪ್ ಜಾರಿ ಮಾಡಿದ್ದಾರೆ. ಬಿಜೆಪಿ ಪಕ್ಷದ ಅಧ್ಯಕ್ಷರಿಂದ ಕಳೆದ ಹತ್ತು ದಿನಗಳ ಹಿಂದೆಯೇ ವಿಪ್ ಜಾರಿಯಾಗಿದ್ದರೆ, ಕಾಂಗ್ರೆಸ್ ತನ್ನ ಪಾಲಿಕೆ ಸದಸ್ಯರಿಗೆ ಸೋಮವಾರ ವಿಪ್ ಜಾರಿ ಮಾಡಿದೆ.
ಹು-ಧಾ ಪಾಲಿಕೆ ಮೇಯರ, ಉಪಮೇಯರ್ ಸ್ಥಾನಕ್ಕೆ ಇಂದು ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ವಹಿಸಲು ಮಹಾನಗರ ಪಾಲಿಕೆ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಚುನಾವಣೆ ನಡೆಯುವ ಪಾಲಿಕೆ ಕಚೇರಿ ಸುತ್ತಮುತ್ತಲಿನ 200 ಮೀಟರ್ ಪ್ರದೇಶದಲ್ಲಿ ಇಂದು ಬೆಳಗ್ಗೆ 6ರಿಂದ ರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಹೇರಿ ಹು-ಧಾ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಆದೇಶ ಹೊರಡಿಸಿದ್ದಾರೆ.
ಪಾಲಿಕೆ ಚುಕ್ಕಾಣಿ ಹಿಡಿಯಲು ಉಭಯ ಪಕ್ಷಗಳ ಮಧ್ಯೆ ಫೈಟ್: ಮಹಾನಗರ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್, ಬಿಜೆಪಿ ಶತಾಯುಗತಾಯು ಸೆಣಸಾಟ ನಡೆಸುತ್ತಿದೆ. ಆಪರೇಷನ್ ಹಸ್ತದ ಭೀತಿಯಲ್ಲಿ ಬಿಜೆಪಿ ಸದಸ್ಯರು ದಾಂಡೇಲಿ ರೆಸಾರ್ಟ್ನಲ್ಲಿ ತಂಗಿದ್ದಾರೆ. ಇನ್ನು ಇಂದು ವಿದೇಶದಿಂದ ಪ್ರಹ್ಲಾದ್ ಜೋಶಿ ಆಗಮಿಸಿ ಪಕ್ಷದ ನಾಯಕರ ಸಭೆ ನಡೆಸಲಿದ್ದಾರೆ. ಆಪರೇಷನ್ ಹಸ್ತದ ಭೀತಿಯಿಂದಾಗಿ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಗಳು ಯಾರು ಎಂಬುದು ಇಂದಷ್ಟೇ ನಿರ್ಧಾರವಾಗಲಿದೆ. ಚುನಾವಣೆವರೆಗೆ ಪಕ್ಷದ ಪಾಲಿಕೆ ಸದಸ್ಯರನ್ನು ರೆಸಾರ್ಟ್ನಲ್ಲಿ ಹಿಡಿದಿಟ್ಟುಕೊಳ್ಳುವುದು ಬಿಜೆಪಿ ಕಾರ್ಯತಂತ್ರವಾಗಿದೆ.
ಸದ್ಯ ಹು-ಧಾ ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಈ ಬಾರಿ ಹು-ಧಾ ಪಾಲಿಕೆಯನ್ನು ವಶಕ್ಕೆ ಪಡೆಯಲು ಎಲ್ಲ ರಣತಂತ್ರ ರೂಪಿಸಿದೆ.