ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಹರಡುತ್ತಿದೆ. ಅದರ ಜೊತೆಗೆ ಇತರೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ದಾಪುಗಾಲಿಟ್ಟಿದೆ. ಇದಕ್ಕಾಗಿ ಹೊಸ ಹೊಸ ಯೋಜನೆಗಳನ್ನು ರೂಪುಗೊಳಿಸಿದೆ.
ನೈರ್ಮಲ್ಯ ಹಾಗೂ ಕುಡಿಯುವ ನೀರಿನ ಪರಿಶುದ್ಧತೆ ಬಗ್ಗೆ ಪಾಲಿಕೆ ಎಚ್ಚರಿಕೆಯ ಕ್ರಮ ವಹಿಸಿದ್ದು, ವಸತಿ, ಅಂಗಡಿ ಸಮುಚ್ಚಯಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಅವಕಾಶವಾಗದಂತೆ ಎಚ್ಚರಿಕೆವಹಿಸಿದೆ. ಮೀನು, ಮಾಂಸ ಮಾರಾಟದ ಅಂಗಡಿಗಳ ಮಾಲೀಕರಿಗೆ ತೆರೆದಿಟ್ಟು ವ್ಯಾಪಾರ ಮಾಡದಂತೆ ಎಚ್ಚರಿಕೆ ನೀಡಲಾಗುತ್ತಿದೆ. ಅದರ ಜೊತೆಗೆ ಫಾಗಿಂಗ್ ಮತ್ತು ಡಿಗ್ಗಿಂಗ್ ಹೆಚ್ಚು ಮಾಡಲಾಗುತ್ತಿದೆ.
ಮಹಾನಗರ ಪಾಲಿಕೆ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಅದಕ್ಕಾಗಿ ಎಲ್ಲೆಂದರಲ್ಲಿ ಕಸ ಎಸೆದು ಹೋಗುವವರಿಗೆ ಕಣ್ಣಿಡಲು ಸಿಸಿಟಿವಿಗಳನ್ನು ಹಾಕಲು ಮುಂದಾಗಿದೆ. ಕಸ ವಿಲೇವಾರಿಗಾಗಿ ಹೆಚ್ಚೆಚ್ಚು ವಾಹನಗಳನ್ನು ನಿಯೋಜನೆ ಮಾಡಲಾಗಿದೆ. ಹಸಿ ಕಸ ಹಾಗೂ ಒಣ ಕಸವನ್ನು ಪಾಲಿಕೆ ವಾಹನಗಳು ಪ್ರತಿ ಮನೆಗೆ ತೆರಳಿ ಸಂಗ್ರಹ ಮಾಡುತ್ತಿದೆ. ಈ ಮೂಲಕ ನಗರದ ನೈರ್ಮಲೀಕರಣ ಹಾಗೂ ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.