ಹುಬ್ಬಳ್ಳಿ: ಅಣ್ಣಿಗೇರಿ ತಾಲೂಕಿನಲ್ಲಿ ನೆರೆ ಸಂತ್ರಸ್ತರಿಗೆ ಸಿಗಬೇಕಾದ ಪರಿಹಾರ ಬೇನಾಮಿಯವರ ಹೆಸರಿಗೆ ಸಂದಾಯ ಮಾಡುವ ಮೂಲಕ ವ್ಯವಸ್ಥಿತ ಹಾಗೂ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ.
ನೆರೆಹಾವಳಿಗೆ ಬಿದ್ದ ಮನೆಗಳಿಗೆ ಪರಿಹಾರ ನೀಡುವಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎನ್ನುವ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತನಿಖಾಧಿಕಾರಿಯನ್ನು ವರ್ಗಾವಣೆ ಮಾಡಿ, ಅಣ್ಣಿಗೇರಿ ತಹಶೀಲ್ದಾರರಿಗೆ 32 ದಿನಗಳ ರಜೆ ನೀಡಲಾಗಿದೆ. ತನಿಖೆ ದಾರಿ ತಪ್ಪಿಸುವ ದಿಕ್ಕಿನಲ್ಲಿ ಕಾಣದ ಕೈಗಳ ಕೈವಾಡ ನಡೆದಿರುವ ಅನುಮಾನ ವ್ಯಕ್ತವಾಗಿದೆ.
ಅಂದಾಜು 50 ಲಕ್ಷ ರೂಪಾಯಿ ದುರುಪಯೋಗವಾಗಿದೆ ಎನ್ನಲಾಗ್ತಿದೆ. ಎಲ್ಲಾ ಸಂತ್ರಸ್ತರ ಖಾತೆಗೆ ಒಟ್ಟು ₹40 ಲಕ್ಷ 55 ಸಾವಿರ 200 ರೂಪಾಯಿ ಜಮಾ ಆಗಬೇಕಿತ್ತು. ಇದನ್ನು ಅಣ್ಣಿಗೇರಿ ತಹಶೀಲ್ದಾರ ಕಚೇರಿಯ ಪ್ರೊಬೆಶನರಿ ದ್ವಿತೀಯ ದರ್ಜೆ ಸಹಾಯಕ ಮಂಜುನಾಥ ಮುಧೋಳ ಎಂಬುವರು ತನ್ನ ತಾಯಿಯ ಹೆಸರಿಗೆ ಸಂದಾಯ ಮಾಡಿಕೊಂಡಿದ್ದರು. ಭದ್ರಾಪುರ ಮತ್ತು ನಾಗರಳ್ಳಿ ನಿವಾಸಿಗಳ ಹೆಸರಿನಲ್ಲಿ ₹40,55,200 ಹಣವನ್ನು ತಹಶೀಲ್ದಾರರ ಗಮನಕ್ಕೆ ಬಾರದಂತೆ ಜಮಾ ಮಾಡಿಕೊಂಡಿದ್ದರು ಎನ್ನಲಾಗ್ತಿದೆ.
ಇದನ್ನೂ ಓದಿ: ಲಾಂಛನ ವ್ಯಾಗ್ರವಾಗಿದೆ, ಉಗ್ರವಾಗಿದೆ ಎಂಬುದು ನಮ್ಮ ದೃಷ್ಟಿಕೋನವನ್ನು ಸೂಚಿಸುತ್ತದೆ: ಸಿಎಂ ಬೊಮ್ಮಾಯಿ
ತಹಶೀಲ್ದಾರರ ಸಹಿ ಫೋರ್ಜರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳಾಗಿ ಜಿಲ್ಲಾಧಿಕಾರಿ ಕಚೇರಿಯ ಯೋಜನಾ ನಿರ್ದೇಶಕರಾದ ರುದ್ರೇಶ ಅವರನ್ನು ನೇಮಕ ಮಾಡಲಾಗಿತ್ತು. ತನಿಖಾಧಿಕಾರಿಗಳು ತನಿಖೆ ಚುರುಕುಗೊಳಿಸುತ್ತಿದ್ದಂತೆ ಅವರನ್ನು ಬಳ್ಳಾರಿಗೆ ವರ್ಗಾವಣೆ ಮಾಡಲಾಗಿದೆ. ಇಡೀ ಪ್ರಕರಣದ ಕೇಂದ್ರ ಬಿಂದು ತಹಶೀಲ್ದಾರ ಮಂಜುನಾಥ ಅಮವಾಸ್ಯೆ ಅವರಿಗೆ 32 ದಿನಗಳ ಕಾಲ ರಜೆ ನೀಡಿ ಧಾರವಾಡ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಆದೇಶ ನೀಡಿದ್ದಾರೆ. ಇವೆಲ್ಲವೂ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.