ಹುಬ್ಬಳ್ಳಿ: ಇದು ಛೋಟಾ ಮುಂಬೈ ಖ್ಯಾತಿಯ ನಗರ. ಇಂಥ ನಗರದಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಸಾಕಷ್ಟು ಶ್ರಮ ವಹಿಸುತ್ತಿರುವ ಪೊಲೀಸ್ ಇಲಾಖೆ ಈಗ ಮತ್ತೊಂದು ನಿರ್ಧಾರಕ್ಕೆ ಮುಂದಾಗಿದೆ.
ಹೌದು, ಹು-ಧಾ ಕ್ರೈಂ ನಗರಿ ಆಗುತ್ತಿದೆ. ಈ ಬೆಳವಣಿಗೆಯನ್ನು ತಡೆಗಟ್ಟಲು ಪೊಲೀಸರು ಹೊಸ ಯೋಜನೆಗಳನ್ನು ರೂಪಿಸಿದ್ದಾರೆ. ಹು-ಧಾ ಪೊಲೀಸ್ ಕಮಿಷನರೇಟ್ ಠಾಣಾ ವ್ಯಾಪ್ತಿಯಲ್ಲಿ 15 ದಿನಕ್ಕೊಮ್ಮೆ ಸಭೆ ನಡೆಸಲು ಕಮಿಷನರ್ ಸೂಚನೆ ನೀಡಿದ್ದಾರೆ. ಅಲ್ಲದೇ ಸಂಶಯಾಸ್ಪದ ವ್ಯಕ್ತಿಗಳ ವಿಚಾರಣೆ ಮಾಡುವಂತೆಯೂ ತಿಳಿಸಿದ್ದಾರೆ. ಸ್ಥಳೀಯರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರಿಗೆ ಕಠಿಣ ಸಂದೇಶ ರವಾನಿಸುವುದು ಈ ಸಭೆಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಡಿಸಿಪಿ, ಎಸಿಪಿ ಹಾಗೂ ಇನ್ಸ್ಪೆಕ್ಟರ್ಗಳಿಗೆ ಪೊಲೀಸ್ ಆಯುಕ್ತ ಲಾಭೂರಾಮ್ ಸೂಚನೆ ನೀಡಿದ್ದಾರೆ.
ಆಯಾ ಪ್ರದೇಶದ ಜನಪ್ರತಿನಿಧಿಗಳು, ಗಣ್ಯರು, ವರ್ತಕರು, ಉದ್ಯಮಿಗಳು, ಹಿರಿಯ ನಾಗರಿಕರು, ವಿದ್ಯಾರ್ಥಿಗಳ ಜೊತೆ ಸಭೆ ನಡೆಸಿ ಅಪರಾಧ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಬೇಕು. ಅನುಮಾನಾಸ್ಪದವಾಗಿ ಅಥವಾ ಅಯುಧಗಳನ್ನು ಇಟ್ಟುಕೊಂಡು ಓಡಾಡುವವರನ್ನು ವಿಚಾರಣೆ ನಡೆಸಬೇಕು. ಈ ಸಂದರ್ಭದಲ್ಲಿ ಸಮರ್ಪಕ ಉತ್ತರ ನೀಡದಿದ್ದರೆ ಅವರ ಮೇಲೆ ಪ್ರಕರಣ ದಾಖಲಿಸಬೇಕೆಂದು ತಿಳಿಸಲಾಗಿದೆ.
ಹಳೆ ಹುಬ್ಬಳ್ಳಿ, ಕಸಬಾ, ಬೆಂಡಿಗೇರಿ, ಅಶೋಕ ನಗರ, ಕೇಶ್ವಾಪುರ, ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ಚಾಕು ಇರಿತ, ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ಕಸಬಾ ಠಾಣೆ ವ್ಯಾಪ್ತಿಯಲ್ಲಿ ಎರಡು ವಾರಗಳಲ್ಲಿ ಮೂರು ಚಾಕು ಪ್ರಕರಣ ದಾಖಲಾಗಿದೆ. ಇಬ್ಬರು ಮೃತಪಟ್ಟಿದ್ದಾರೆ. ಅಪರಾಧ ಹಿನ್ನೆಲೆ ಅಥವಾ ರೌಡಿ ಪಟ್ಟಿಯಲ್ಲಿಲ್ಲದ ವ್ಯಕ್ತಿಗಳೇ ಹೆಚ್ಚಾಗಿ ಇಂಥ ಕೃತ್ಯದಲ್ಲಿ ಪಾಲ್ಗೊಂಡಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಅವಳಿ ನಗರದಲ್ಲಿ PSIಗಳ ಕೊರತೆ: ಅಪರಾಧ ಪ್ರಕರಣಗಳ ಹೆಚ್ಚಳ