ಹುಬ್ಬಳ್ಳಿ : ಮಗುವನ್ನು ಕೊಲೆ ಮಾಡಿ ಮೃತ ದೇಹ ಕಿಮ್ಸ್ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದ ತಾಯಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸುವಲ್ಲಿ ಗೋಕುಲ್ ರಸ್ತೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಬುಧವಾರ ಹೆತ್ತ ಮಗುವನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಬಿಟ್ಟು ಪೂಜಾ ಎಂಬ ಮಹಿಳೆ ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಳು. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ ಗೋಕುಲ್ ರಸ್ತೆ ಠಾಣೆ ಪೊಲೀಸರು, ಮಗುವಿನ ತಾಯಿ ಹಾಗೂ ಪ್ರಿಯಕರ ದಾದಾಪೀರ ಜೊತೆಗೂಡಿ ಮಗುವನ್ನು ಕೊಲೆ ಮಾಡಿ ಬಳಿಕ ಆಸ್ಪತ್ರೆಗೆ ಸೇರಿಸುವ ನಾಟಕವಾಡಿರಬೇಕು ಎಂದು ಶಂಕೆ ವ್ಯಕ್ತ ಪಡಿಸಿದ್ದರು.
ಹೆಚ್ಚಿನ ಓದಿಗಾಗಿ : ಕಿಮ್ಸ್ ಆಸ್ಪತ್ರೆಯಲ್ಲಿ ಹೆತ್ತ ಮಗು ಬಿಟ್ಟು ಪರಾರಿಯಾದ ಪ್ರಕರಣಕ್ಕೆ ಹೊಸ ತಿರುವು..
ಘಟನೆಯ ವಿವರ :
ಆಗಸ್ಟ್ 20ರಂದು ಪೂಜಾ ಎಂಬ ಮಹಿಳೆ ಆಕೆಯ ಪ್ರಿಯಕರ ದಾದಾಪೀರ ಜೊತೆ ಖುಷಿ(4ವರ್ಷ) ಎಂಬ ಸತ್ತಿದ್ದ ಮಗುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದು, ಮಗುವಿಗೆ ಜ್ವರ ಇದೆ ಚಿಕಿತ್ಸೆ ನೀಡಿ ಎಂದು ವೈದರಲ್ಲಿ ತಿಳಿಸಿದ್ದರು. ಆದರೆ ಆಸ್ಪತ್ರೆಗೆ ಬರುವ ಮುಂಚೆಯೇ ಮಗು ತೀರಿಕೊಂಡಿತ್ತು, ಪರೀಕ್ಷೆ ನಡೆಸಿದ ವೈದ್ಯರಿಗೆ ಮಗು ಮೃತಪಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ಮಗುವನ್ನು ಕರೆ ತಂದಿದ್ದ ಜೋಡಿ ಮೃತದೇಹ ಬಿಟ್ಟು ಅಲ್ಲಿಂದ ಕಾಲ್ಕಿತ್ತಿತ್ತು. ಈ ಸಂಬಂಧ ನಗರದ ಗೋಕುಲ್ ರಸ್ತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹೆಚ್ಚಿನ ಓದಿಗಾಗಿ : ಸಾವನ್ನಪ್ಪಿದ ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾದ ತಾಯಿ
ಅನೈತಿಕ ಸಂಬಂಧ ಕೊಲೆಗೆ ಕಾರಣ :
ಮೃತಪಟ್ಟಿರುವ ಹೆತ್ತ ಮಗುವಿನ ಮೃತದೇಹವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗಲು, ಮಗುವಿನ ತಾಯಿ ಪೂಜಾ ಹಾಗೂ ದಾದಪೀರ ನಡುವಿನ ಅನೈತಿಕ ಸಂಬಂಧವೇ ಕಾರಣ ಎಂದು ಹೇಳಲಾಗಿದೆ. ಕಳೆದ ಎಂಟು ವರ್ಷಗಳ ಹಿಂದೆ ಬೆಳಗಾವಿಯ ರಾಜು ತಾಳೂರಕರ್ಗೆ ಪೂಜಾಳನ್ನು ಕೊಟ್ಟು ಮದುವೆ ಮಾಡಲಾಗಿತ್ತು. ಆದರೆ ಪೂಜಾ ದಾದಾಪೀರ್ ಎಂಬವನ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಕಳೆದ ಒಂದು ತಿಂಗಳಿಂದ ಗಂಡನ ಮನೆ ಬಿಟ್ಟು ಪ್ರಿಯಕರನ ಜೊತೆ ವಾಸವಿದ್ದಳು. ಮೃತ ಮಗು, ರಾಜು ತಾಳೂಕರ್ ಗೆ ಹುಟ್ಟಿದೆ, ಹೀಗಾಗಿ ಈ ಮಗು ಇರಬಾರದು ಎಂದು ದಾದಾಪೀರ ಮಗುವಿಗೆ ಕಿರುಕುಳ ನೀಡುತ್ತಿದ್ದ. ಕೊನೆಗೆ, ಆಗಸ್ಟ್ 20 ರಂದು ಮಗುವಿನ ಹೆತ್ತ ತಾಯಿ ಮತ್ತು ಆಕೆಯ ಪ್ರಿಯಕರ, ದೊಣ್ಣೆಯಿಂದ ಮಗುವಿನ ತಲೆಗೆ ಹೊಡೆದು ಕೊಂದು ಆನಂತರ ಆಸ್ಪತ್ರೆಗೆ ಸೇರಿಸುವ ನಾಟಕವಾಡಿ ಕೊನೆಗೆ ಅಲ್ಲಿಂದ ಕಾಲ್ಕಿತ್ತಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಕೊನೆಗೂ ಒಂದು ವಾರದ ನಂತರ ಆರೋಪಿಗಳಾದ ದಾದಾಪೀರ್ ಹಾಗೂ ಪೂಜಾಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.