ಹುಬ್ಬಳ್ಳಿ: ಅಗಾಧವಾದ ನೆನಪಿನ ಶಕ್ತಿಯಿಂದ ಇಲ್ಲೋರ್ವ ಬಾಲಕ ದೇಶವೇ ತನ್ನತ್ತ ನೋಡುವಂತೆ ಮಾಡಿದ್ದಾನೆ.
ಗಣೇಶ ಪೇಟೆಯ ನೀಲಾಂಬಿಕಾ ಶೆಟ್ಟರ್ ಮತ್ತು ಕಿರಣ ಶೆಟ್ಟರ್ ದಂಪತಿಯ ಪುತ್ರ ಆರ್ಯನ್ ಶೆಟ್ಟರ್ಗೆ ಈಗ 6 ವರ್ಷ 7 ತಿಂಗಳು ವಯಸ್ಸು. ತನ್ನಲ್ಲಿರುವ ಅಗಾಧವಾದ ಜ್ಞಾಪಕ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರು ದಾಖಲಾಗುವಂತೆ ಮಾಡುವ ಮೂಲಕ ವಾಣಿಜ್ಯ ನಗರಿ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ. 186ಕ್ಕೂ ಹೆಚ್ಚು ವಿರುದ್ಧಾರ್ಥಕ ಪದ, ಅಂಕಿ-ಅಂಶಗಳನ್ನು ಇಳಿಕೆ ಕ್ರಮದಲ್ಲಿ ಬರೆಯುವಂತಹ ಹಾಗೂ ಕೋಟಿ ಸಂಖ್ಯೆಗಳನ್ನು ನಿರರ್ಗಳವಾಗಿ ಬರೆಯುವ ಮೂಲಕ ಇತ್ತೀಚೆಗೆ ನಡೆದ ಆನ್ಲೈನ್ ಸ್ಪರ್ಧೆಯಲ್ಲಿ ಸಾಧನೆಗೈದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ಗೆ ಆಯ್ಕೆ ಆಗಿದ್ದಾನೆ.
ಆರ್ಯನ್ ಚಿನ್ಮಯಿ ವಿದ್ಯಾಲಯದಲ್ಲಿ 1ನೇ ತರಗತಿ ಓದುತ್ತಿದ್ದಾನೆ. ಲಾಕ್ಡೌನ್ ಸಂದರ್ಭದಲ್ಲಿ ಮನೆಯಲ್ಲಿದ್ದ ವೇಳೆ ಈತನಲ್ಲಿದ್ದ ಜ್ಞಾಪಕ ಶಕ್ತಿಯನ್ನು ಪಾಲಕರು ಗುರುತಿಸಿದ್ದಾರೆ. ಮನೆಯೇ ಮೊದಲ ಪಾಠ ಶಾಲೆ ಎಂಬಂತೆ ಮನೆಯಲ್ಲಿಯೇ ಆತನಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ದಾಖಲೆ ಸೃಷ್ಟಿಸಲು ಪೋಷಕರು ಬೆನ್ನೆಲುಬಾಗಿದ್ದಾರೆ. ತಮ್ಮ ಮಗನ ಈ ಸಾಧನೆಗೆ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಚಿತ್ರಕಲೆಯಲ್ಲಿ ಮಿಂಚಿದ ಶಿರಸಿ ಯುವಕ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದ ಸಾಧಕ
ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪ್ರತಿಭಾವಂತರ ಸಂಖ್ಯೆಯೇನೂ ಕಡಿಮೆ ಇಲ್ಲ. ಅದೆಷ್ಟೋ ಪ್ರತಿಭಾವಂತರಿಗೆ ಪೂರಕ ವೇದಿಕೆಗಳಿಲ್ಲದ ಕಾರಣ ಎಲೆಮರೆಯ ಕಾಯಿಗಳಂತಿದ್ದಾರೆ. ಹಾಗಾಗಿ ಪಾಲಕರು ತಮ್ಮ ಮಕ್ಕಳಲ್ಲಿರುವ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸದಬೇಕಿದೆ. ಸದ್ಯ ವಾಣಿಜ್ಯನಗರಿ ಕೀರ್ತಿಯನ್ನು ಮತ್ತಷ್ಟು ಇಮ್ಮಡಿಗೊಳಿಸಿದ ಆರ್ಯನ್ ಸಾಧನೆಗೆ ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿದೆ.