ಹುಬ್ಬಳ್ಳಿ: ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಅನುಷ್ಠಾನಗೊಂಡ ಬಿ.ಆರ್.ಟಿ.ಎಸ್ ಯೋಜನೆಯಡಿ ಆರಂಭವಾದ ಚಿಗರಿ ಬಸ್ ಸೇವೆ ಯಶಸ್ವಿಯಾಗಿ ಎರಡು ವರ್ಷ ಪೂರೈಸಿದೆ.
ಚಿಗರಿ ಬಸ್ ಪ್ರಯಾಣಿಕರಿಗೆ ತೃಪ್ತಿಕರ ಸೇವೆ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಪರಿಸರ ಸ್ನೇಹಿಯಾಗಿ, ಆರ್ಥಿಕ ಯೋಜನೆಯ ಸೇವೆಗಳನ್ನು ವಿಸ್ತರಿಸಲಾಗುವುದು ಎಂದು ಹೆಚ್.ಡಿ.ಬಿ.ಆರ್.ಟಿ.ಎಸ್ ಹಾಗೂ ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಹೇಳಿದರು.
ವಾ.ಕ.ರ.ಸಾ ಸಂಸ್ಥೆಯ ಸಾಂಸ್ಕೃತಿಕ ಮತ್ತು ಕ್ರೀಡಾ ಸಭಾ ಭವನದಲ್ಲಿ ಏರ್ಪಡಿಸಿದ್ದ ಹೆಚ್.ಡಿ.ಬಿ.ಆರ್.ಟಿ.ಎಸ್ ಎರಡನೇ ವಾರ್ಷಿಕೋತ್ಸವ ಹಾಗೂ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಅವಧಿಯಲ್ಲಿ ಸುಮಾರು 3.35 ಕೋಟಿ ಜನ ಚಿಗರಿ ಬಸ್‍ನಲ್ಲಿ ಪ್ರಯಾಣಿಸಿ ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿದ್ದಾರೆ. ಅದರಲ್ಲಿ ಸುಮಾರು ಒಂದು ಲಕ್ಷದಷ್ಟು ಜನ ತಮ್ಮ ನಿತ್ಯ ಜೀವನದ ಪ್ರಯಾಣಕ್ಕಾಗಿ 100 ಮಾದರಿಯ ತಡೆರಹಿತ ಬಸ್‍ಗಳನ್ನು ಅವಲಂಬಿಸಿದ್ದಾರೆ. ಈ ಯೋಜನೆಯಡಿ ವಾಕರಸಾಸಂ, ಹೆಚ್.ಡಿ .ಬಿ.ಆರ್.ಟಿ.ಎಸ್ ಹಾಗೂ ಉಪ ಏಜೆನ್ಸಿಗಳ ಮೂಲಕ ಸುಮಾರು 300 ಜನರಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹೆಚ್.ಡಿ.ಬಿ.ಆರ್.ಟಿ.ಎಸ್ ಪ್ರಧಾನ ವ್ಯವಸ್ಥಾಪಕ ಗಣೇಶ ರಾಠೋಡ, ಮುಖ್ಯ ಹಣಕಾಸು ಅಧಿಕಾರಿ ತಮ್ಮಣ್ಣ ಮಾದರ, ವಾಕರಸಾ ಸಂಸ್ಥೆ ಅಧಿಕಾರಿಗಳಾದ ವಿವೇಕಾನಂದ ವಿಶ್ವಜ್ಞ, ಪಿ.ವೈ.ನಾಯಕ್, ಪ್ರಸನ್ನಕುಮಾರ, ಕೆ.ಆರ್.ಡಿ.ಸಿ.ಎಲ್ ಕಾರ್ಯನಿರ್ವಾಹಕ ಇಂಜಿನಿಯರ್ ನಾರಾಯಣ ಕುರಂದಕರ್ ಮತ್ತು ಸಿಬ್ಬಂದಿ, ಕಾರ್ಯಾಚರಣೆ ಪೂರಕ ಸಹ ಸಂಸ್ಥೆಗಳ ಸಿಬ್ಬಂದಿ ಹಾಗೂ ಸಹ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.