ಹುಬ್ಬಳ್ಳಿ: 1992ರಲ್ಲಿ ನಡೆದ ಗಲಭೆ ಪ್ರಕರಣವೊಂದರಲ್ಲಿ ಬಂಧಿಸಲ್ಪಟ್ಟಿದ್ದ ಆರೋಪಿ ಶ್ರೀಕಾಂತ್ ಪೂಜಾರಿ ಷರತ್ತು ಬದ್ಧ ಜಾಮೀನಿನ ಮೇಲೆ ಇಂದು ಹುಬ್ಬಳ್ಳಿ ಉಪ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ. ಜೈಲಿನಿಂದ ಹೊರ ಬರುತ್ತಿದ್ದಂತೆ ಶ್ರೀಕಾಂತ್ ಪೂಜಾರಿ ಅವರಿಗೆ ಸಿಹಿ ತಿನ್ನಿಸಿ, ಹೂವಿನ ಹಾರ ಹಾಕಿ ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದರು.
ಬಿಜೆಪಿ ಮುಖಂಡ, ಶಾಸಕ ಮಹೇಶ್ ಟೆಂಗಿನಕಾಯಿ, ಹಿಂದೂ ಮುಖಂಡ ಜಯತೀರ್ಥ ಕಟ್ಟಿ ಸೇರಿ ಹಲವರು ಶ್ರೀಕಾಂತ್ ಪೂಜಾರಿ ಅವರನ್ನು ಬರಮಾಡಿಕೊಂಡರು.
1992ರಲ್ಲಿ ನಡೆದ ಗಲಭೆ ಪ್ರಕರಣವೊಂದರಲ್ಲಿ ಬಂಧಿಸಲ್ಪಟ್ಟಿದ್ದ ಶ್ರೀಕಾಂತ್ ಪೂಜಾರಿ ಕಳೆದ 9 ದಿನಗಳಿಂದ ಉಪ ಕಾರಾಗೃಹದಲ್ಲಿದ್ದರು. ಶುಕ್ರವಾರ ಅವರಿಗೆ ಜೆಎಂಎಫ್ಸಿ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಇದನ್ನೂ ಓದಿ: 1992ರ ಗಲಭೆ ಪ್ರಕರಣ: ಶ್ರೀಕಾಂತ್ ಪೂಜಾರಿಗೆ ಜಾಮೀನು ಮಂಜೂರು
ಬಿಡುಗಡೆ ಬಳಿಕ ಮಾತನಾಡಿದ ಶ್ರೀಕಾಂತ್ ಪೂಜಾರಿ, ಕೆಲಸ ಇದೆ ಅಂತ ಶುಕ್ರವಾರ ಕರೆದುಕೊಂಡು ಏಕಾಏಕಿ ಬಂಧಿಸಿದ್ದಾರೆ. ಈ ಹಿಂದಿನ ಎಲ್ಲ ಕೇಸ್ಗಳು ಖುಲಾಸೆಯಾಗಿವೆ. ಈ ಕೇಸ್ ಮಾತ್ರ ಇತ್ತು ಎಂದು ತಿಳಿಸಿದರು. ಶ್ರೀರಾಮಚಂದ್ರ ಅವರಿಗಾಗಿ ಹೋರಾಟ ಮಾಡಿದ್ದೇನೆ, ಈಗ ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲೇ ಅಯೋಧ್ಯೆಗೂ ಹೋಗುತ್ತೇನೆ ಎಂದು ಪ್ರತಿಕ್ರಿಯೆ ನೀಡಿದರು.
ಇದೇ ವೇಳೆ ಮಾತನಾಡಿದ ಶ್ರೀಕಾಂತ್ ಪರ ವಕೀಲ ಸಂಜೀವ ಬಡಾಸ್ಕರ್, ಇದು ಸತ್ಯಕ್ಕೆ ಸಿಕ್ಕ ಜಯ. ಶ್ರೀಕಾಂತ್ ಮೇಲೆ ಇಲ್ಲಸಲ್ಲದ ಕೇಸ್ ಹಾಕಿದ್ದರು. ಹೀಗಾಗಿ ಕಡಿಮೆ ಸಮಯದಲ್ಲಿ ಜಾಮೀನು ಸಿಕ್ಕಿದ್ದಕ್ಕೆ ಸಂತಸವಾಗಿದೆ. ಪ್ರಕರಣ ಸಂಬಂಧ ಯಾವುದೇ ದಾಖಲೆಗಳಿದ್ದ ಕಾರಣ ಮೇಲ್ನೋಟಕ್ಕೆ ಇದು ಸುಳ್ಳು ಕೇಸ್ ಎಂದು ಕಂಡು ಬರುತ್ತಿರುವುದರಿಂದ ಅರ್ಜಿ ಸಲ್ಲಿಸಿದ ಮೂರೇ ದಿನದಲ್ಲಿ ಜಾಮೀನು ಸಿಕ್ಕಿರುವುದು ಸಂತಸ ಮೂಡಿಸಿದೆ ಎಂದರು.
ಶ್ರೀಕಾಂತ್ ಪೂಜಾರಿ ಬಿಡುಗಡೆ ನ್ಯಾಯಕ್ಕೆ ಸಿಕ್ಕ ಜಯ ಎಂದ ಶಾಸಕ ಟೆಂಗಿನಕಾಯಿ: ಶ್ರೀಕಾಂತ್ ಪೂಜಾರಿ ಬಿಡುಗಡೆಯಾಗಿರುವುದು ನ್ಯಾಯಕ್ಕೆ ಸಿಕ್ಕ ಜಯವಾಗಿದೆ. ನಾವು ಹಿಂದೆಯೇ ಹೇಳಿರುವ ಹಾಗೆ ಏನೇ ಕಾನೂನು ಹೋರಾಟ ಇದ್ದರೂ ನಾವು ಬದ್ಧ ಎಂದು ಹೇಳಿದ್ದೇವು. ಈ ನಿಟ್ಟಿನಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ನಮ್ಮ ವಕೀಲರು ಉತ್ತಮ ಕೆಲಸ ಮಾಡಿ ಬಿಡುಗಡೆ ಮಾಡಿಸುವ ಕಾರ್ಯವನ್ನು ಮಾಡಿದ್ದಾರೆ. ನ್ಯಾಯಾಲಯಕ್ಕೆ ಹಾಗೂ ವಕೀಲರಿಗೆ ಅಭಿನಂದನೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ಶ್ರೀಕಾಂತ್ ಪೂಜಾರಿ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಅವರು ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.