ಹುಬ್ಬಳ್ಳಿ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಫೀವರ್ ಇಡೀ ದೇಶದಲ್ಲಿ ಜೋರಾಗಿದೆ. ತಮ್ಮಿಷ್ಟದ ತಂಡ, ನಾಯಕರ ಭರ್ಜರಿ ಆಟ ನೋಡಲು ಒಂದು ವರ್ಗದ ಜನರ ಕಾಯುತ್ತಿದ್ದರೆ, ಮತ್ತೊಂದು ವರ್ಗ ಇದನ್ನೇ ಬಂಡವಾಳ ಮಾಡಿಕೊಂಡು ಕೋಟಿ ಕೋಟಿ ಲೂಟಿ ಮಾಡಲು ಹೊಂಚು ಹಾಕಿ ಕುಳಿತಿವೆ. ಅಂತಹ ಕ್ರಿಕೆಟ್ ಬೆಟ್ಟಿಂಗ್ ಕುಳಗಳ ಹೆಡೆಮುರಿ ಕಟ್ಟಲು ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಕಮೀಷನರೇಟ್ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.
ಈವರೆಗೂ ಪೊಲೀಸರು ಮಾತ್ರ ಕ್ರಿಕೆಟ್ ಬುಕ್ಕಿಗಳ ಮೇಲೆ ಮತ್ತು ಬೆಟ್ಟಿಂಗ್ ಕುಳಗಳ ಮೇಲೆ ಹದ್ದಿನಕಣ್ಣು ಇರಿಸುತ್ತಿದ್ದರು. ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ಬಾರಿಯ ಐಪಿಎಲ್ ಸೀಜನ್ ಬಹಳ ಕಾವು ಪಡೆದುಕೊಂಡಿದೆ. ಚುನಾವಣಾ ಕಾರ್ಯದ ಒತ್ತಡದಲ್ಲಿ ಎಲ್ಲೆಡೆ ಗಮನ ಹರಿಸುವುದಕ್ಕೆ ಕಷ್ಟ ಎಂದರಿತ ಹು ಧಾ ಪೊಲೀಸ್ ಇಲಾಖೆ ಸಾರ್ವಜನಿಕರಿಂದ ಸಹಾಯ, ಸಹಕಾರ ಬಯಸಿದೆ.
ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರ ಸಹಕಾರದಿಂದ ಬೆಟ್ಟಿಂಗ್ ಆಡುವವರ ಮಾಹಿತಿಯನ್ನು ಪಡೆದುಕೊಂಡು, ಅವರಿಂದ ದೊಡ್ಡ ದೊಡ್ಡ ಬುಕ್ಕಿಗಳನ್ನು ತಲುಪುವ ಮಾಸ್ಟರ್ ಪ್ಲಾನ್ ಅನ್ನು ಪೊಲೀಸ್ ಇಲಾಖೆ ಮಾಡಿಕೊಂಡಿದೆ. ತಮ್ಮ ಸುತ್ತಮುತ್ತ ಯಾರಾದರೂ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ನಿರತರಾಗಿದ್ದರೆ ಅಂಥವರ ಬಗ್ಗೆ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಹರಿಬಿಟ್ಟಿದ್ದಾರೆ.
ಇನ್ನು ನಗರದ ಭಾಗಕ್ಕೆ ಸೀಮಿತವಾಗಿದ್ದ ಬೆಟ್ಟಿಂಗ್ ದಂಧೆ ಈಗ ಗ್ರಾಮೀಣ ಭಾಗವನ್ನೂ ಆವರಿಸಿಕೊಂಡಿದೆ. ಪೊಲೀಸರು ಎಷ್ಟೇ ಅಲರ್ಟ್ ಆಗಿದ್ದರೂ, ಹಳೆಯ ಕೆಲ ಬುಕ್ಕಿಗಳು, ಗೋವಾದಲ್ಲಿ ಕುಳಿತುಕೊಂಡೇ ಆ್ಯಪ್‌ಗಳ ಮೂಲಕ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದಾರೆ. ಆ್ಯಪ್‌ಗಳ ಮೂಲಕ ದಂಧೆ ನಡೆಸುವವರನ್ನು ಪತ್ತೆ ಹಚ್ಚುವುದು ಕಷ್ಟದ ಕೆಲಸ ಎಂದರಿತ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸರು ಬೆಟ್ಟಿಂಗ್ ಆಡುವವರ ಮೂಲಕ ದೊಡ್ಡ ದೊಡ್ಡ ಬುಕ್ಕಿಗಳಿಗೆ ಗಾಳ ಹಾಕುತ್ತಿದ್ದಾರೆ.
ಆ್ಯಪ್‌ಗಳ ಮೇಲೆ ಸೈಬರ್ ಕ್ರೈಂ ವಿಭಾಗದಿಂದ ಕಣ್ಣು: ಏಜೆಂಟರು ಒದಗಿಸುವ ಲೈವ್ ಲೈನ್ ಗುರು, ಕ್ರಿಕೆಟ್ ಮಜ್ಞಾ, ಲೋಟಸ್, ಬೆಟ್-365, ಬೆಟ್ ಮೇಳದಂತಹ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಯುವಕರ ಮೊಬೈಲ್ ಸೇರುತ್ತಿವೆ. ರಮ್ಮಿ ಸರ್ಕಲ್, ಡ್ರೀಮ್ ಎಲೆವೆನ್‌ನಂತಹ ಅಂತರಾಷ್ಟ್ರೀಯ ವೆಬ್ಸೈಟ್ಗಳ ಮೇಲೆ ಕ್ರಮ ಕೈಗೊಳ್ಳುವುದು ಕಷ್ಟ. ಹೀಗಾಗಿ, ಐಪಿಎಲ್ ಪಂದ್ಯಾವಳಿ ವೇಳೆ ನಾಯಿ ಕೊಡೆಯಂತೆ ಏಳುವ ಆ್ಯಪ್‌ಗಳ ಮೇಲೆ ಸೈಬರ್ ಕ್ರೈಂ ವಿಭಾಗವೂ ಹದ್ದಿನ ಕಣ್ಣಿಡಲು ಮುಂದಾಗಿದೆ.
ನೌಕರಿ ಕೊಡಿಸುವುದಾಗಿ 20 ಲಕ್ಷ ರೂ. ವಂಚನೆ : ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚುತ್ತಲೇ ಇವೆ. ಎರಡು ಪ್ರತ್ಯೇಕ ಪ್ರಕರಣದಲ್ಲಿ ಸುಮಾರು 20 ಲಕ್ಷ ರೂಪಾಯಿ ವಂಚನೆ ಮಾಡಿರುವ ಪ್ರಕರಣಗಳು ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿವೆ.
ಇಲ್ಲಿಯ ವಿದ್ಯಾನಗರದ ಸ್ಮಿತಾ ಪಾಟೀಲ ಅವರಿಗೆ ಕೆಲಸ ಕೊಡಿಸುವುದಾಗಿ ಕರೆ ಮಾಡಿ ನಂಬಿಸಿದ ವ್ಯಕ್ತಿಯೊಬ್ಬರಿಂದ ಬ್ಯಾಂಕ್ ಮಾಹಿತಿ ಪಡೆದು 16.96 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಇಂಟರ್ ಪಬ್ಲಿಕ್ ಅಡ್ವರ್ಟೈಸಿಂಗ್ ಗ್ರೂಪ್ನಲ್ಲಿ ಬಿಡುವಿನ ವೇಳೆಯಲ್ಲಿ ಮನೆಯಿಂದಲೇ ಕೆಲಸ ಮಾಡಬಹುದು ಎನ್ನುವ ಸಂದೇಶವಿರುವ ಲಿಂಕ್ ಅನ್ನು ವಂಚಕ ಸ್ಮಿತಾ ಅವರ ಮೊಬೈಲ್‌ಗೆ ಕಳುಹಿಸಿದ್ದಾನೆ. ಅವರನ್ನು ಸಂಪರ್ಕಿಸಿ, ಮುಂಗಡವಾಗಿ 2 ಸಾವಿರ ಖಾತೆಗೆ ವರ್ಗಾಯಿಸಿದ್ದಾನೆ. ನಂತರ ಅವರಿಗೆ ಕೆಲಸ ನೀಡುವ ನೆಪದಲ್ಲಿ ಪೇಯ್ಡ್ ಟಾಸ್ಕ್ (ವರ್ಗಾಯಿಸುವ ಹಣಕ್ಕೆ ದುಪ್ಪಟ್ಟು ಹಣ ನೀಡುವುದು) ಮಾಡಿಸಿಕೊಂಡು ವಂಚಿಸಿದ್ದಾನೆ.
ಇನ್ನು ಇಲ್ಲಿಯ ನವನಗರದ ಸ್ವಾತಿ ಎಸ್ ಅವರಿಗೆ ಉದ್ಯೋಗ ಕೊಡಿಸುವುದಾಗಿ ಮೊಬೈಲ್‌ನಲ್ಲಿ ಸಂಪರ್ಕಿಸಿದ ವ್ಯಕ್ತಿ, ಅವರಿಂದ ಬ್ಯಾಂಕ್ ಮಾಹಿತಿ, ಒಟಿಪಿ ಪಡೆದು 3.17 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಈ ಕುರಿತು ಸೈಬರ್ ಠಾಣೆಯಲ್ಲಿ ಪ್ರಕರಣ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ : 5 ರೂಪಾಯಿ ಕೇಳಿದ್ದಕ್ಕೆ ಬಾಲಕನ ಕೊಲೆ.. ಹುಬ್ಬಳ್ಳಿಯಲ್ಲಿ ಸೈಕೋ ರವಿ ಅರೆಸ್ಟ್