ಹುಬ್ಬಳ್ಳಿ: ರಾಜ್ಯ ಸರ್ಕಾರದ ಬಜೆಟ್ ಮಂಡನೆಯಾದ ಬೆನ್ನಲ್ಲೇ ಸ್ಥಳೀಯ ಆಡಳಿತಕ್ಕೂ ಬಜೆಟ್ಗೆ ಕಾಲ ಕೂಡಿ ಬಂದಿದೆ. ಅವಳಿ ನಗರದ ಜನರ ನಿರೀಕ್ಷೆಯ ಬಜೆಟ್ಗೆ ದಿನಗಣನೆ ಆರಂಭವಾಗಿದೆ.
ಹು-ಧಾ ಮಹಾನಗರ ಪಾಲಿಕೆಯು 2022-23ನೇ ಸಾಲಿನ ಹಣಕಾಸು ವರ್ಷಕ್ಕೆ 919 ಕೋಟಿ ರೂ. ಬಜೆಟ್ ತಯಾರಿಸಿದ್ದು, 36.73 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 85 ಕೋಟಿ ರೂ. ಹೆಚ್ಚಳವಾಗಿದೆ.
ಪ್ರಸಕ್ತ ವರ್ಷ ಸ್ಟಾಲೇಜ್, ಆಸ್ತಿಕರ, ಲೀಗ್ ಲ್ಯಾಂಡ್, ಘನತ್ಯಾಜ್ಯ ಸೆಸ್, ರೋಡ್ ಕಟಿಂಗ್ ಚಾರ್ಜ್, ಸ್ಟ್ಯಾಂಪ್ ಜಾಹೀರಾತು ಸೇರಿದಂತೆ ವಿವಿಧ ಮೂಲಗಳಿಂದ 381 ಕೋಟಿ ರೂ. ಆದಾಯ ನಿರೀಕ್ಷಿಸಿರುವ ಪಾಲಿಕೆಯು ಪೌರಕಾರ್ಮಿಕರ ವೇತನ, ಕರೆಂಟ್ ಬಿಲ್, ರಸ್ತೆ ರಿಪೇರಿ, ಘನತ್ಯಾಜ್ಯ ನಿರ್ವಹಣೆ ಒಳಗೊಂಡು ವಿವಿಧ ಕಾರ್ಯಗಳಿಗೆ 371 ಕೋಟಿ ರೂ. ಖರ್ಚು ಮಾಡುವ ಬಗ್ಗೆ ಬಜೆಟ್‌ನಲ್ಲಿ ತಿಳಿಸಲಾಗಿದೆ.
ಕಳೆದ ವರ್ಷ 150 ಕೋಟಿ ರೂ. ಬಾಕಿ ಬರಬೇಕಿದೆ. ಸರ್ಕಾರದ ಮೂಲಗಳಿಂದ 15ನೇ ಹಣಕಾಸು ಯೋಜನೆಯಡಿ 52 ಕೋಟಿ ರೂ. ಅದರಂತೆ 5 ವರ್ಷ ಯೋಜನೆಯ ಮಹಾತ್ಮ ಗಾಂಧಿನಗರ ವಿಕಾಸ ಯೋಜನೆಯಡಿ 82 ಕೋಟಿ ರೂ. ನಿರೀಕ್ಷಿಸಲಾಗಿದೆ. ಹಾಗೆಯೇ, ವಿದ್ಯುತ್ ಬಿಲ್ ಹಾಗೂ ನಿರ್ವಹಣೆಗೆ ಎಸ್‌ಎಫ್‌ಸಿ ಅನುದಾನದ ಅಡಿ 85 ಕೋಟಿ ರೂ. ಅನುದಾನ ನಿರೀಕ್ಷಿಸಲಾಗಿದೆ.
ಇನ್ನೂ ಆಟೋ ಚಾಲಕರು, ಪತ್ರಕರ್ತರು ಮತ್ತು ಕಲಾವಿದರ ಕ್ಷೇಮಾಭಿವೃದ್ಧಿಗೆ ತಲಾ 10 ಲಕ್ಷ ರೂ. ಮೀಸಲು. ಬಡತನ ನಿರ್ಮೂಲನೆ ಮತ್ತು ಸಮಾಜ ಕಲ್ಯಾಣಕ್ಕೆ 24.70 ಕೋಟಿ. ಪಾಲಿಕೆಯ ಆಸ್ಪತ್ರೆಗಳ ನಿರ್ವಹಣೆಗೆ 8.98 ಕೋಟಿ. ಮುಖ್ಯ ರಸ್ತೆ, ವೃತ್ತಗಳ ಅಗಲೀಕರಣಕ್ಕಾಗಿ ಭೂ ಸ್ವಾಧೀನ ಮಾಡಿಕೊಳ್ಳಲು 15.18 ಕೋಟಿ.
ಇಂದಿರಾ ಕ್ಯಾಂಟೀನ್‌ಗೆ ಪಾಲಿಕೆ ವಂತಿಗೆ 2.50 ಕೋಟಿ ರೂ. ಶುಚಿತ್ವ, ನೈರ್ಮಲೀಕರಣಕ್ಕೆ ಕೇವಲ 72 ಲಕ್ಷ ರೂ, ಮಹಿಳಾ ಬಜಾರ್ ಮೇಳ ಹಾಗೂ ಮಹಿಳೆಯರ ಸುರಕ್ಷತೆಗೆ ಅಲ್ಲಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ 6 ಕೋಟಿ ರೂ. ಈ ರಸ್ತೆ, ಕಲ್ಲು ಹಾಸು, ಪಾದಚಾರಿ ರಸ್ತೆ, ತೆರೆದ ಚರಂಡಿ ಮತ್ತು ಒಳಚರಂಡಿಗಳ ನಿರ್ಮಾಣಕ್ಕೆ 18 ಕೋಟಿ ಹಾಗೂ ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಗೆ 18 ಕೋಟಿ ರೂ. ಮೀಸಲಿಡುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಒಟ್ಟಿನಲ್ಲಿ ಅವಳಿನಗರದ ಅಭಿವೃದ್ಧಿಯ ಕನಸನ್ನು ಹೊತ್ತಿರುವ ಪಾಲಿಕೆ ಬಜೆಟ್ ಎಷ್ಟರಮಟ್ಟಿಗೆ ಜನರಿಗೆ ತಲುಪಲಿದೆ ಎಂಬುವುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ಶಿವಮೊಗ್ಗ: ಪರೀಕ್ಷೆ ಬಹಿಷ್ಕರಿಸಿ ಮನೆಗೆ ತೆರಳಿದ ವಿದ್ಯಾರ್ಥಿನಿಯರು