ಹುಬ್ಬಳ್ಳಿ: ಲಾಕ್ಡೌನ್ ನಿರ್ಬಂಧ ಸಡಿಲಿಕೆ ಮಾಡಿದ್ದು, ಕಳೆದ ಎರಡು ತಿಂಗಳಿಂದ ಸ್ಥಗಿತಗೊಂಡಿದ್ದ ಮಹಾರಾಷ್ಟ್ರ ರಾಜ್ಯಕ್ಕೆ ಬಸ್ ಸಂಚಾರವನ್ನು ಮತ್ತೆ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ಸಾರ್ವಜನಿಕ ಸಾರಿಗೆಗೆ ಅನುಮತಿ ನೀಡಿರುವ ಜಿಲ್ಲೆಗಳ ಮಿರಜ, ಇಚಲಕರಂಜಿ, ಸೊಲ್ಲಾಪುರ, ಬಾರ್ಸಿ, ಔರಂಗಾಬಾದ್, ಪಂಡರಾಪುರ, ತುಳಜಾಪುರ ಮತ್ತಿತರ ಸ್ಥಳಗಳಿಗೆ ಬಸ್ ಸಂಚಾರ ಮತ್ತೆ ಆರಂಭವಾಗಿದೆ.
ಮಿರಜ ಮತ್ತು ಇಚಲಕರಂಜಿ ಬಸ್ಗಳು ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತವೆ. ಇನ್ನುಳಿದ ಬಸ್ಗಳು ಹೊಸೂರು ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ಹುಬ್ಬಳ್ಳಿ ವಾಕರಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ.
ಲಾಕ್ಡೌನ್ ಪೂರ್ವದಲ್ಲಿ ಹುಬ್ಬಳ್ಳಿ ವಿಭಾಗದಿಂದ ಮಹಾರಾಷ್ಟ್ರಕ್ಕೆ 38, ಗೋವಾ 11, ತೆಲಂಗಾಣ 12, ತಮಿಳುನಾಡು 2 ಹಾಗೂ ಆಂಧ್ರಪ್ರದೇಶಕ್ಕೆ 2 ಹೀಗೆ ಒಟ್ಟು 65 ಬಸ್ಗಳು ಸಂಚರಿಸುತ್ತಿದ್ದವು. ಮುಂಬೈ, ಶಿರಡಿ, ಪಿಂಪ್ರಿ, ಹೈದರಾಬಾದ್, ಚೆನ್ನೈ, ಸೊಲ್ಲಾಪುರ ಮುಂತಾದ ಪ್ರಮುಖ ಸ್ಥಳಗಳಿಗೆ ವೋಲ್ವೊ, ಎಸಿ ಸ್ಲೀಪರ್, ನಾನ್ ಎಸಿ ಸ್ಲೀಪರ್ ಹಾಗೂ ರಾಜಹಂಸ ಸೇರಿದಂತೆ 26 ಪ್ರತಿಷ್ಟಿತ ಐಶಾರಾಮಿ ಬಸ್ಗಳು ಸಂಚರಿಸುತ್ತಿದ್ದವು.
ಇವುಗಳೊಂದಿಗೆ ಮುಂಬೈ, ಪೂನಾ, ಬೊರಿವಿಲಿ, ಪಣಜಿ, ವಾಸ್ಕೋ, ಮಡಗಾಂವ, ಪಂಡರಾಪುರ, ಮೀರಜ, ಈಚಲಕರಂಜಿ, ಔರಂಗಾಬಾದ್, ಸೋಲಾಪುರ, ಬಾರ್ಶಿ, ಮಂತ್ರಾಲಯ, ಹೈದರಾಬಾದ್ ಮತ್ತಿತರ ಸ್ಥಳಗಳಿಗೆ 39 ವೇಗದೂತ ಬಸ್ಗಳನ್ನು ಸಹ ಕಾರ್ಯಾಚರಣೆ ಮಾಡಲಾಗುತ್ತಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.
ವಾರಾಂತ್ಯ ಕರ್ಫ್ಯೂ: ಶನಿವಾರ, ರವಿವಾರ ಪ್ರಯಾಣಿಕರಿದ್ದರೆ ಬಸ್ ಸಂಚಾರ..
ಕೋವಿಡ್ -19 ರೂಪಾಂತರಿ ವೈರಾಣು ಹರಡುವಿಕೆ ತಡೆಗಟ್ಟುವ ಸಲುವಾಗಿ ಜಿಲ್ಲೆಯಲ್ಲಿ ಶುಕ್ರವಾರ 7 ರಿಂದ ಸೋಮವಾರ ಬೆಳಗ್ಗೆ 5 ರವರೆಗೆ ವಾರಾಂತ್ಯ ಕರ್ಫ್ಯೂ ವಿಧಿಸಲಾಗಿದೆ. ಈ ಅವಧಿಯಲ್ಲಿ ಸಾರ್ವಜನಿಕ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಶನಿವಾರ ಹಾಗೂ ರವಿವಾರದಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವ್ಯಾಪ್ತಿಯ ಬಸ್ ನಿಲ್ದಾಣಗಳಿಂದ ಬಸ್ಗಳ ಸಂಚಾರ ಎಂದಿನಂತೆ ಇರುತ್ತದೆ. ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಸ್ಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ. ಮುಂಗಡ ಬುಕ್ಕಿಂಗ್ ಪ್ರಯಾಣಿಕರ ಸಂಖ್ಯೆ ಆಧರಿಸಿ ದೂರ ಮಾರ್ಗದ ರಾತ್ರಿ ಸಾರಿಗೆ ಬಸ್ಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ. ಸೋಮವಾರ ಬೆಳಗ್ಗೆ 6 ರಿಂದ ಎಂದಿನಂತೆ ಎಲ್ಲಾ ಮಾರ್ಗಗಳಲ್ಲಿ ಬಸ್ಗಳು ಸಂಚರಿಸಲಿವೆ.
ಓದಿ: ಏನೂ ಗೊತ್ತಿಲ್ಲದೇ ಶಾಸಕರಾಗಿದ್ದಾರೆ, ಜನ ಬುದ್ಧಿ ಕಲಿಸುತ್ತಾರೆ : ಶಾಸಕ ಗಣೇಶ್ ವಿರುದ್ಧ ಸಚಿವ ಕೆಎಸ್ಈ ವಾಗ್ದಾಳಿ