ಹುಬ್ಬಳ್ಳಿ: ಕೊರೊನಾ ಲಾಕ್ಡೌನ್ನಿಂದ ಜನ ಜೀವನ ಅಸ್ತವಸ್ತ್ಯವಾಗಿ ಊಟಕ್ಕೂ ಪರದಾಡುತ್ತಿದ್ದಾರೆ. ಈ ನಡುವೆ ವಾಣಿಜ್ಯ ನಗರಿ, ಚೋಟಾ ಮುಂಬೈ ಎನಿಸಿಕೊಳ್ಳುವ ಹುಬ್ಬಳ್ಳಿಯಲ್ಲಿ ಮಾತ್ರ ಸದ್ದಿಲ್ಲದೇ ಇಸ್ಪೀಟು, ಮಟ್ಕಾ ದಂಧೆ ಶುರುವಾಗಿದೆ. ಲಾಕ್ಡೌನ್ ಬಂಡವಾಳವಾಗಿಸಿಕೊಂಡಿರುವ ದಂಧೆಕೋರರು ಇದೀಗ ನಗರದಲ್ಲಿ ಕದ್ದುಮುಚ್ಚಿ ತಮ್ಮ ಆಟ ಶುರು ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿ - ಧಾರವಾಡ ನಗರಗಳಲ್ಲಿ ಜೂಜಾಟ, ಕ್ರಿಕೆಟ್ ಬೆಟ್ಟಿಂಗ್, ಮಟ್ಕಾ ದಂಧೆ ಎಗ್ಗಿಲ್ಲದೇ ನಿರಂತರವಾಗಿ ನಡೆಯುತ್ತಿದೆ. ಈಗಾಗಲೇ ಹು - ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲೇ 116 ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದು, ಈ ಸಂಬಂಧ ನೂರಾರು ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಹು - ಧಾ ನಗರ ಅಷ್ಟೇ ಅಲ್ಲದೆ ಗ್ರಾಮೀಣ ಭಾಗಗಳಲ್ಲೂ ಸಹ ಬೆಟ್ಟಿಂಗ್, ಜೂಜಾಟ ದಂಧೆ ನಡೆಯುತ್ತಿದೆ. ಸದ್ಯ ಅಂತಹವರನ್ನ ಬಂಧಿಸುವಲ್ಲಿ ಪೊಲೀಸರು ನಿತ್ಯ ಶ್ರಮಿಸುತ್ತಿದ್ದರೂ ದಂಧೆಕೋರರು ಮಾತ್ರ ತಮ್ಮ ಕಾಯಕ ಮುಂದುವರೆಸಿದ್ದಾರೆ. ಕೊರೊನಾ ನಡುವೆಯೇ ಇಷ್ಟೊಂದು ಪ್ರಕರಣಗಳು ಬೆಳಕಿಗೆ ಬಂದಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿಯಾಗಿದೆ.