ಹುಬ್ಬಳ್ಳಿ: ಮುಂಗಾರು ಮಳೆ ಸಾಕಷ್ಟು ಸಂಕಷ್ಟ ತಂದೊಡ್ಡಿರುವುದು ಮಾತ್ರವಲ್ಲದೇ ಹಿಂಗಾರು ಮಳೆಯೂ ಕೂಡ ಸಾರ್ವಜನಿಕರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಬೆನ್ನು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಸೂರುಗಳನ್ನು ಕಳೆದುಕೊಂಡ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ನಿನ್ನೆ ತಡರಾತ್ರಿ ಸುರಿದ ಭಾರಿ ಮಳೆಗೆ ಮನೆ ಕುಸಿದು ಅಪಾರ ಪ್ರಮಾಣದ ಹಾನಿ ಉಂಟಾಗಿರುವ ಘಟನೆ ಕುಂದಗೋಳ ತಾಲೂಕಿನ ಚಿಕ್ಕನರ್ತಿ ಗ್ರಾಮದಲ್ಲಿ ನಡೆದಿದೆ. ಅಲ್ಲಾಸಾಬ್ ನದಾಫ್ ಎಂಬುವರ ಮನೆ ಮಳೆಯಿಂದ ನೆಲಕ್ಕುರಳಿದ್ದು, ಕಳೆದ ಮುಂಗಾರು ಮಳೆಯಲ್ಲಿಯೂ ಕೂಡ ಇವರ ಮನೆ ಕುಸಿದು ಹಾನಿಯನ್ನುಂಟಾಗಿತ್ತು. ಮನೆ ಕುಸಿದು ಚೇತರಿಸಿಕೊಳ್ಳುವ ಮೊದಲೇ ಮತ್ತೊಮ್ಮೆ ಅದೇ ಮನೆ ಕುಸಿದಿದರಿಂದ ಸಂಕಷ್ಟಕ್ಕೆ ಕಾರಣವಾಗಿದೆ.
ಸೂಕ್ತವಾದ ಮನೆಯಿಲ್ಲದೇ ನದಾಫ್ ಅವರ ಕುಟುಂಬ ಬೇರೆಡೆಗೆ ಆಶ್ರಯ ಪಡೆಯುವಂತ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಬಾರಿ ಈ ಕುಟುಂಬಕ್ಕೆ 15 ಸಾವಿರ ಅಲ್ಪ ಪರಿಹಾರ ನೀಡಲಾಗಿತ್ತು. ಅದರಲ್ಲಿಯೇ ಮನೆ ದುರಸ್ತಿ ಮಾಡಿದ್ದ ಕುಟುಂಬಕ್ಕೆ ಈಗ ಮಳೆ ಮತ್ತೊಮ್ಮೆ ಶಾಕ್ ನೀಡಿದ್ದು, ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.