ಹುಬ್ಬಳ್ಳಿ : ಕೊರೊನಾ ಭೀತಿಯಿಂದ ತತ್ತರಿಸಿರುವ ಹೋಟೆಲ್ ಉದ್ಯಮ ಲಾಕ್‌ಡೌನ್ ಬಳಿಕ ಆರಂಭಗೊಂಡರೂ ಸಂಕಷ್ಟದಿಂದ ಹೊರಬಂದಿಲ್ಲ. ಸಿಬ್ಬಂದಿ ವೇತನ, ನಿರ್ವಹಣೆಯ ಖರ್ಚು, ಅದು - ಇದು ಎಂದೆಲ್ಲಾ ಮಾಲೀಕರಿಗೆ ಆರ್ಥಿಕ ಹೊರೆಯಾಗುತ್ತಿದೆ.
ಕೊರೊನಾ ಎಂಬ ಮಹಾಮಾರಿಯಿಂದ ಪ್ರಪಂಚವೇ ತಲ್ಲಣಗೊಂಡಿದ್ದು ಸುಳ್ಳಲ್ಲ. ಭಾರತದಲ್ಲೂ ದಿನದಿಂದ ದಿನಕ್ಕೆ ಕೊರೊನಾ ಅಟ್ಟಹಾಸ ಮೆರೆಯುತ್ತಲೇ ಇದೆ. ಇತ್ತೀಚೆಗೆ 4.0 ಲಾಕ್‌ಡೌನ್ ತೆರವು ಮಾಡಿದ್ದ ಕೇಂದ್ರ ಸರ್ಕಾರ, ಹೋಟೆಲ್ ಉದ್ಯಮ ಪ್ರಾರಂಭಿಸುವಂತೆ ಆದೇಶ ನೀಡಿತ್ತು. ಕಳೆದ ತಿಂಗಳಿನಿಂದ ಹೋಟೆಲ್ ಉದ್ಯಮವೇನೋ ಆರಂಭವಾಗಿದೆ. ಆದರೆ, ಅಂದುಕೊಂಡಷ್ಟು ಲಾಭ ಬರುತ್ತಿಲ್ಲ ಎನ್ನುತ್ತಿದ್ದಾರೆ ಹೋಟೆಲ್ ಮಾಲೀಕರು.
ಕೊರೊನಾ ಭೀತಿ ನಡುವೆ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಹೇಳಿಕೊಳ್ಳುವಷ್ಟು ವ್ಯವಹಾರ ಆಗುತ್ತಿಲ್ಲ. ಸಿಬ್ಬಂದಿ ಸಂಖ್ಯೆಯಲ್ಲಿ ಕಡಿತಗೊಳಿಸಲಾಗಿದೆ. ಗ್ರಾಹಕರು ಬಂದರೂ ಕೇವಲ ಚಹಾ, ಕಷಾಯ, ಕಾಫಿ ಕುಡಿಯುತ್ತಿದ್ದಾರೆ. ವಿದ್ಯುತ್ ಬಿಲ್ ಗಗನಕ್ಕೇರಿದೆ. ತರಕಾರಿ ಬೆಲೆ ಕೇಳುವ ಹಾಗಿಲ್ಲ, ಸಾಲದೆಂಬಂತೆ ಪ್ಲಾಸ್ಟಿಕ್ನಿಂದ ತಯಾರಿಸಿದ ತಟ್ಟೆ, ಲೋಟದಿಂದ ಹಿಡಿದು ಕೆಲವು ವಸ್ತುಗಳನ್ನು ಪ್ರತಿದಿನ ಗ್ರಾಹಕರಿಗೆ ನೀಡಲೇಬೇಕು. ಇವೆಲ್ಲದರ ಮಧ್ಯೆ ಲಾಭ ಗಳಿಸುವುದು ಹೇಗೆ ಎಂದು ಪ್ರಶ್ನಿಸುತ್ತಾರೆ ಲಾಭದ ನಿರೀಕ್ಷೆಯಲ್ಲಿದ್ದ ಹೋಟೆಲ್ ಮ್ಯಾನೇಜರ್ ರಮೇಶ್.
ಕೊರೊನಾ ವೈರಸ್ ಹರಡುವಿಕೆಯಿಂದ ಮೂರು ತಿಂಗಳ ಕಾಲ ವ್ಯಾಪಾರ - ವಹಿವಾಟು ಇಲ್ಲದೇ, ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್ ಉದ್ಯಮಿಗಳು, ಲಾಕ್‌ಡೌನ್ ಸಡಿಲಿಕೆ ಬಳಿಕ ಉದ್ಯಮ ಪ್ರಗತಿಯ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ನಿತ್ಯದ ವಹಿವಾಟು ಆರಕ್ಕೇರಿಲ್ಲ, ಮೂರಕ್ಕೆ ಇಳಿದಿಲ್ಲ ಎನ್ನುವಂತಾಗಿದೆ. ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ಹೋಟೆಲ್ ಪ್ರವೇಶಕ್ಕೂ ಮುನ್ನ ಸ್ಕ್ರೀನಿಂಗ್, ಸ್ಯಾನಿಟೈಸರ್‌ನಂತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ನಿರೀಕ್ಷಿತ ಸಂಖ್ಯೆಯಲ್ಲಿ ಗ್ರಾಹಕರು ಬಾರದಿರುವುದರಿಂದ ಗ್ರಾಹಕರ ಕೊರತೆ ಕಾಡತೊಡಗಿದೆ ಎನ್ನುತ್ತಾರೆ ಗ್ರಾಹಕ ಗುರುನಾಥ್ ಉಳ್ಳಿಕಾಶಿ.