ಹುಬ್ಬಳ್ಳಿ : ದೇಶಾದ್ಯಂತ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಹೋಮ್ ಕ್ವಾರಂಟೈನ್ ನಲ್ಲಿರಬೇಕಿದ್ದವರು ಕ್ವಾರಂಟೈನ್ ಸೀಲ್ ಅಳಿಸಿ ಅನವಶ್ಯಕವಾಗಿ ತಿರುಗಾಡುತ್ತಿದ್ದು, ಅವರನ್ನು ಪೊಲೀಸರು ಹಿಡಿದು ಮನೆಯಲ್ಲಿಯೇ ಇರುವಂತೆ ಸೂಚಿಸಿದ್ದಾರೆ.
ಬೆಂಗಳೂರಿನಿಂದ ಬಂದಿದ್ದ ಆರು ಜನ, ತಮ್ಮ ಕೈಯಲ್ಲಿ ಹಾಕಲಾಗಿದ್ದ ಹೋಂ ಕ್ವಾರಂಟೈನ್ ಸೀಲ್ ಅಳಿಸಿ ಪೊಲೀಸರ ಕಣ್ಣಿಗೆ ಮಣ್ಣೆರಚಲು ಪ್ರಯತ್ನಿಸಿದ್ದರು. ಅವರಲ್ಲಿದ್ದ ಮೂವರು ನಗರದ ಎಸ್. ಎಂ. ಕೃಷ್ಣಾ ನಗರದ ನಿವಾಸಿಗಳಾಗಿದ್ದರು. ಇನ್ನೂ ಮೂರು ಜನರು ನವಲಗುಂದ ನಿವಾಸಿಗಳು ಎಂದು ತಿಳಿದುಬಂದಿದೆ. ಇವರು ಬೆಂಗಳೂರಿನಿಂದ ಬಂದಿದ್ದ ಹಿನ್ನೆಲೆ ಎಲ್ಲರ ಕೈಗೂ ಆರೋಗ್ಯಾಧಿಕಾರಿಗಳು ಹೋಂ ಕ್ವಾರಂಟೈನ್ ಸೀಲ್ ಹಾಕಿದ್ದರು.
ಸೀಲ್ ಹಾಕಿದ್ದರೂ ಕೂಡಾ ಅನಾವಶ್ಯಕವಾಗಿ ತಿರುಗಾಡುತ್ತಿದ್ದವರನ್ನು ಕರೆದೊಯ್ದ ಬೆಂಡಿಗೇರಿ ಠಾಣೆಯ ಪೊಲೀಸರು ಸೀಲ್ ಹಾಕಲಾಗಿದ್ದ ಆರು ಜನರಿಗೂ ಮನೆಯಲ್ಲಿರುವಂತೆ ಸೂಚಿಸಿ, ಮತ್ತೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿದರು.