ಹುಬ್ಬಳ್ಳಿ : ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳ ಹಾಗೂ ಸಿಬ್ಬಂದಿ ಕಾರ್ಯಪಾಲನೆ ಪರಿಶೀಲನೆ ಬಗ್ಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಅಧಿಕಾರಿಗಳಿಗೆ ಕೆಲವು ಸಲಹೆಗಳನ್ನು ನೀಡಿದ್ದೇನೆ. ಠಾಣೆಗೆ ಆಗಮಿಸಿದ್ದ ಸಾರ್ವಜನಿಕರ ಸಮಸ್ಯೆ ಬಗ್ಗೆ ಪರಿಶೀಲನೆ ಮಾಡಿದ್ದೇನೆ. ಜನಸ್ನೇಹಿ ಪೊಲೀಸ್ ಠಾಣೆ ಬಗ್ಗೆ ಪರಿಶೀಲನೆ ಮಾಡಿದ್ದೇನೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.
ಕೋಮುಗಲಭೆಗೆ ಸಾಕ್ಷಿಯಾಗಿದ್ದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಠಾಣೆಯಲ್ಲಿ ಹಾಜರಿ ಪುಸ್ತಕ ಹಾಗೂ ದಿನಚರಿ ಪುಸ್ತಕ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಜನಸ್ನೇಹಿ ಪೊಲೀಸರು ಎಂದು ನಾವು ಹೇಳುತ್ತೇವೆ. ನಿಜವಾಗಿಯೂ ಜನಸ್ನೇಹಿ ಆಗಿದ್ಯಾ ಎನ್ನುವುದನ್ನು ಪರಿಶೀಲಿಸಲು ಬಂದಿದ್ದೆ. ಪೊಲೀಸರು ಸಾರ್ವಜನಿಕರ ಸಮಸ್ಯೆಗಳಿಗೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ್ದೇನೆ. ಹಳೇ ಹುಬ್ಬಳ್ಳಿ ಗಲಾಟೆಯಲ್ಲಿ ಭಾಗಿಯಾದವರ ವಿಚಾರವಾಗಿ ನಾನು ಠಾಣೆಗೆ ಆಗಮಿಸಿಲ್ಲ. ಆ ವಿಚಾರದ ಬಗ್ಗೆ ಕಾನೂನು ರೀತಿ ಏನಾಗಬೇಕೋ ಅದು ಆಗುತ್ತದೆ. ನಮ್ಮ ಇಲಾಖೆ ಕಾರ್ಯ ವೈಖರಿ ಬಗ್ಗೆ ಪರಿಶೀಲನೆಗೆ ಬಂದಿದ್ದೆ. ಅದಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಆ ಪ್ರಕರಣದಲ್ಲಿ ಅಮಾಯಕರನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಬಂಧಿತರ ಕುಟುಂಬಸ್ಥರು ಹಾಗೂ ಈ ಭಾಗದ ಶಾಸಕರು ಈ ಬಗ್ಗೆ ಮನವಿ ಪತ್ರ ಕೊಟ್ಟಿದ್ದಾರೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತೆ. ಸಂಪುಟದಲ್ಲಿ ಉಪ ಸಮಿತಿ ರಚನೆ ಮಾಡಲಾಗಿದೆ. ಸಂಪುಟ ಉಪ ಸಮಿತಿ ಸಭೆಯಲ್ಲಿ ಈ ವಿಷಯವನ್ನು ಮುಂದಿಟ್ಟು, ಚರ್ಚಿಸಲಾಗುತ್ತದೆ. ಸಂಪುಟ ಉಪ ಸಮಿತಿಯಲ್ಲಿ ಈ ಪ್ರಕರಣದ ಸತ್ಯಾಸತ್ಯತೆ ಹಾಗೂ ಗಂಭೀರತೆ ಅರಿತು ಕ್ರಮ ಕೈಗೊಳ್ಳಲಾಗುತ್ತದೆ. ಇದರಲ್ಲಿ ನಿಜವಾಗಿಯೂ ಅಮಾಯಕರು ಇದ್ದಾರಾ, ಇಲ್ಲವಾ ಎಂಬುದರ ಬಗ್ಗೆ ಚರ್ಚೆ ಹಾಗೂ ಪರಿಶೀಲನೆ ಮಾಡಲಾಗುತ್ತದೆ. ನಂತರ ಸಂಪುಟಕ್ಕೆ ತಿಳಿಸಿ, ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಇದೇ ವೇಳೆ ಗೃಹ ಸಚಿವರು ಭರವಸೆ ನೀಡಿದರು.
ಲೋಕಸಭೆ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಂದರ್ಭಾನುಸಾರವಾಗಿ ಅವರು ಮೈತ್ರಿ ಮಾಡಿಕೊಳ್ಳುತ್ತಾರೆ. ಅದರಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಎಫೆಕ್ಟ್ ಆಗುವುದಿಲ್ಲ. ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದು ಇದೇ ಮೊದಲೇನಲ್ಲ. ಹಿಂದೆಯೂ ಮೈತ್ರಿ ಮಾಡಿಕೊಂಡಿದ್ದರು. ಸರ್ಕಾರವನ್ನೂ ಮಾಡಿದ್ದರು ಎಂದರು.
ಇದನ್ನೂ ಓದಿ : ಹೈಕಮಾಂಡ್ ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ಬದ್ಧ : ಸಂಸದ ಎಸ್ ಮುನಿಸ್ವಾಮಿ