ಹುಬ್ಬಳ್ಳಿ: ಪ್ರಚೋದನಾಕಾರಿ ವಾಟ್ಸಾಪ್ ಸ್ಟೇಟಸ್ ವಿರೋಧಿಸಿ ಹಳೇ ಹುಬ್ಬಳ್ಳಿಯಲ್ಲಿ ನಿನ್ನೆ ನಡೆದ ಪ್ರತಿಭಟನೆಯಲ್ಲಿ ಕಿಡಿಗೇಡಿಗಳು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದರು. ಈ ವೇಳೆ ಸರ್ಕಾರಿ ವಾಹನಗಳು ಜಖಂಗೊಂಡಿವೆ. ಸಣ್ಣ ನಿರ್ಲಕ್ಷ್ಯವಾಗಿದ್ರೂ ಕೆಜೆ ಹಳ್ಳಿ- ಡಿಜೆ ಹಳ್ಳಿ ಘಟನೆ ಮರುಕಳಿಸುತ್ತಿತ್ತು. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅಂಥವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಹಳೇ ಹುಬ್ಬಳ್ಳಿಯ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಕುರಿತು ಮಾತನಾಡಿದ ಅವರು, ಕೆಜೆ ಹಳ್ಳಿ- ಡಿಜೆಹಳ್ಳಿ ಘಟನೆಗೂ ಹುಬ್ಬಳ್ಳಿ ಘಟನೆಗೆ ಸಾಮ್ಯತೆ ಇದೆ. ದೂರು ಕೊಟ್ಟ ಮೇಲೆ ಆರೋಪಿಯನ್ನು ಬಂಧಿಸಿದ್ದರೂ ಗಲಭೆ ಮಾಡಲಾಗಿದೆ. ಇಡೀ ಹುಬ್ಬಳ್ಳಿ ಹೊತ್ತಿ ಉರಿಯುವ ಸಂಭವ ಇತ್ತು. ಇದನ್ನು ಇಂಟೆಲಿಜೆನ್ಸಿ ವಿಫಲತೆ ಎಂದು ಹೇಳೋಕೆ ಬರಲ್ಲ ಎಂದರು.
ನಿನ್ನೆ ನಮ್ಮ ಪೊಲೀಸರು ಗಲಭೆ ನಿಯಂತ್ರಿಸುವಲ್ಲಿ ಸಫಲರಾಗಿದ್ದಾರೆ. ಕೇವಲ ಒಂದು ಗಂಟೆಯಲ್ಲಿ ಎಲ್ಲವನ್ನೂ ತಹಬದಿಗೆ ತಂದಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುವೆ. ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂಬ ಅನುಮಾನ ಬರುತ್ತೆ. ಮತೀಯ ಶಕ್ತಿಗಳನ್ನು ಮಟ್ಟಹಾಕದೇ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಪುತ್ತೂರಿನಲ್ಲಿ ಆಟೋ ಬಳಿಕ ಮಲ್ಲಿಗೆ ವ್ಯಾಪಾರಕ್ಕಿಳಿದ ಹಿಂದೂ ಸಂಘಟನೆಗಳು