ಧಾರವಾಡ: ಜಮೀನಿನ ಮಧ್ಯದಲ್ಲಿ ಹೈಟೆನ್ಷನ್ ವಿದ್ಯುತ್ ಕಂಬ ಹಾಕುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಟೆನ್ಷನ್ ಶುರುವಾಗಿದೆ. ಧಾರವಾಡ ಜಿಲ್ಲೆಯಲ್ಲಿ ರೈತರಿಗೆ ಕಷ್ಟದ ಮೇಲೆ ಕಷ್ಟ ಬರುತ್ತಿವೆ. ಇದೀಗ ಹೈಟೆನ್ಷನ್ ವಿದ್ಯುತ್ ಕಂಬಗಳಿಂದ ಅನ್ನದಾತರು ಕಂಗಾಲಾಗಿದ್ದಾರೆ. ಧಾರವಾಡ ತಾಲೂಕಿನ ಮಾರಡಗಿ, ಹೆಬ್ಬಳ್ಳಿ, ಶಿವಳ್ಳಿ ಸೇರಿ ಹಲವು ಗ್ರಾಮದ ರೈತರ ಜಮೀನಿನಲ್ಲಿ ಹೈಟೆನ್ಷನ್ ವಿದ್ಯುತ್ ಕಂಬ ಹಾಕುತ್ತಿರುವುದರಿಂದ ತೊಂದರೆ ಆರಂಭವಾಗಿದೆ.
ಧಾರವಾಡ ತಾಲೂಕಿನ ಅಮ್ಮಿನಬಾವಿ ರಸ್ತೆಯ ಎಲೆಕ್ಟ್ರಿಕ್ ಗ್ರೀಡ್ನಿಂದ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದವರೆಗೆ ಹೈಟೆನ್ಷನ್ ವಿದ್ಯುತ್ ಕಂಬಗಳನ್ನು ಹಾಕಲಾಗುತ್ತಿದೆ. ಈ ಕಂಬಗಳು ಎಲ್ಲ ರೈತರ ಜಮೀನಿನಲ್ಲಿ ಹಾಕಬೇಕು. ಕೆಪಿಟಿಸಿಎಲ್ ಕಂಬ ಹಾಕುವ ಗುತ್ತಿಗೆ ನೀಡಿ ಕೈ ತೊಳೆದುಕೊಂಡಿದೆ. ಆದರೆ, ರೈತರಿಗೆ ತಿಳಿಸದೇ ಕಂಬ ಹಾಕುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊದಲು ರೈತರ ಜಮೀನಿನಲ್ಲಿ ಕಂಬ ಹಾಕುವ ಬಗ್ಗೆ ಅನುಮತಿ ಪಡೆದುಕೊಳ್ಳದೇ, ಏನೂ ಕೇಳದೇ, ಪರಿಹಾರ ಕೂಡ ನೀಡದೇ ವಿದ್ಯುತ್ ಕಂಬ ಹಾಕಲಾಗುತ್ತಿದೆ ಎಂದು ರೈತರು ಆರೋಪಿಸಿಸುತ್ತಿದ್ದಾರೆ. ಇದರಿಂದ ರೈತರು ಹೊಲದಲ್ಲಿ ಕೆಲಸ ಕೂಡ ಮಾಡಲು ಆಗದಂತ ಸ್ಥಿತಿ ನಿರ್ಮಾಣಗೊಂಡಿದೆ ಎಂಬುದು ಅನ್ನದಾತರ ಅಳಲು. ವಿದ್ಯುತ್ ಕಂಬಗಳನ್ನು ಹಾಕಿದ ಜಾಗದಲ್ಲಿ ಏನೂ ಬೆಳೆಯುವಂತಿಲ್ಲ. ಅಲ್ಲದೇ ಕಂಬದ ಅಕ್ಕಪಕ್ಕ ಕೂಡ ಏನು ಮಾಡುವಂತಿಲ್ಲ. ಹೀಗಾಗಿ ಸಣ್ಣ ರೈತರು ತಮ್ಮಲ್ಲಿ ಇರುವ ಪುಟ್ಟ ಜಮೀನಿನಲ್ಲೇ ಬೆಳೆ ಬೆಳೆದು ಜೀವನ ಮಾಡಬೇಕಾಗಿದೆ. ಆದರೆ ಕೆಪಿಟಿಸಿಎಲ್ ಇದನ್ನು ಏನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ಹೈಟೆನ್ಷನ್ ವಿದ್ಯುತ್ ಕಂಬಗಳನ್ನು ಹಾಕಿಸುತ್ತಿದೆ ಎನ್ನುವುದು ನೊಂದವರ ಆರೋಪವಾಗಿದೆ.
ಮತ್ತೊಂದೆಡೆ ಹೊಲದ ಒಂದು ಕಡೆ ಈ ಕಂಬಗಳನ್ನು ಹಾಕಿದರೆ ತೊಂದರೆ ಇರಲ್ಲ. ಗುತ್ತಿಗೆದಾರ ಅದನ್ನು ಬಿಟ್ಟು ಹೊಲದ ಮದ್ಯದಲ್ಲಿ ಈ ಕಂಬ ಹಾಕುತ್ತಿದ್ದಾರೆ. ಇದು ಕೂಡಾ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲ ರಾಜಕೀಯ ಬೆಂಬಲಿತರ ಹೊಲ ಹಾಗೂ ಸೈಟ್ಗಳಲ್ಲಿ ಅವರು ಹೇಳಿದ ಕಡೆ ಕಂಬ ಹಾಕಿದ್ದಾರೆ. ಆದರೆ ರೈತರಿಗೆ ಮಾತ್ರ ಬರೆ ಎಳೆಯುವಂತೆ ಕಂಬ ಹೊಲದ ಮಧ್ಯದಲ್ಲಿ ಹಾಕಿದ್ದಾರೆ.
ರೈತರ ಆರೋಪದ ಬಗ್ಗೆ ಅಧಿಕಾರಿಗಳು ಹೇಳುವುದೇನು?: ಸದ್ಯ ಈ ಬಗ್ಗೆ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಕೇಳಿದರೆ, ಸುಮಾರು ಆರು ತಿಂಗಳುಗಳಿಂದ ವಿದ್ಯುತ್ ಕಂಬಗಳನ್ನು ಹಾಕುವ ಕೆಲಸ ಮಾಡುತ್ತಿದ್ದೇವೆ. ಈಗಾಗಲೇ ನಾವು ಎಲ್ಲ ರೀತಿಯ ಸರ್ವೇ ಮಾಡಿದ್ದೇವೆ. ಪೇಪರ್ ನೋಟಿಫಿಕೇಶನ್ ಕೊಟ್ಟಿದ್ದೇವೆ. ಇದೆಲ್ಲ ಆದ ಮೇಲೆ ನಾವು ಹೈಟೆನ್ಷನ್ ವಿದ್ಯುತ್ ಕಂಬಗಳನ್ನು ಹಾಕುತ್ತಿರುವ ಕುರಿತು ರೈತರಿಗೆ ನೋಟಿಸ್ ಮೂಲಕ ತಿಳಿಸಿ ಕೆಲಸವನ್ನು ಆರಂಭಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಷ್ಟೇ ಅಲ್ಲ ಕೆಲಸ ಮಾಡಬೇಕಾದರೆ ಹಳ್ಳಿ ಪ್ರದೇಶದಿಂದ ದೂರಕ್ಕೆ, ಧಾರ್ಮಿಕ ಸ್ಥಳಗಳಿಂದ ದೂರಕ್ಕೆ, ಎನ್ಎ ಪ್ಲಾಟ್ಗಳು ಎಲ್ಲವನ್ನೂ ಸರ್ವೇ ಮಾಡಿಯೇ ನಾವು ಕಂಬಗಳನ್ನು ಹಾಕುತ್ತಿರುವುದು. ಗ್ರಾಮದ ಹೊರ ಹೊಲಯದಲ್ಲಿ ಈ ಸರ್ವಿಸ್ ಟವರ್ಗಳನ್ನು ಹಾಕುತ್ತಿದ್ದೇವೆ. ವಿದ್ಯುತ್ ಕಂಬಗಳನ್ನು ಹಾಕುವ ವೇಳೆ ಬೆಳೆ ಹಾಗೂ ಮರಗಳು ನಾಶವಾಗಿರುವುದಕ್ಕೆ ನಾವು ಪರಿಹಾರ ನೀಡುತ್ತೇವೆ. ರೈತರ ಭೂಮಿಗೆ ಪರಿಹಾರವನ್ನು ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ಸಭೆ ನಡೆಸಿ ಅದನ್ನೂ ನೀಡಲಾಗುತ್ತದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.
ಇದನ್ನೂ ಓದಿ: ಹೈಟೆನ್ಷನ್ ಲೈನ್ ಕೆಳಗೆ ವಾಸಿಸುವ ಮನೆ ಮಾಲೀಕರಿಗೆ ಶುರುವಾಯ್ತು ಆತಂಕ..