ಧಾರವಾಡ: ಕೊರೊನಾ ಪರೀಕ್ಷೆಯ ವರದಿ ನೀಡುವ ವಿಚಾರದಲ್ಲಿ ಆರೋಗ್ಯ ಇಲಾಖೆ ಮಾಡಿದ ಎಡವಟ್ಟಿನಿಂದ ಕೆಎಸ್ಆರ್ಟಿಸಿ ಸಿಬ್ಬಂದಿಯೋರ್ವರು ಗೊಂದಲಕ್ಕೀಡಾಗಿದ್ದಾರೆ.
ಜಿಲ್ಲೆಯ ಹೆಬ್ಬಳ್ಳಿ ಅಗಸಿಯ ನಿವಾಸಿ ಕೆಎಸ್ಆರ್ಟಿಸಿ ಸಿಬ್ಬಂದಿ ಜುಲೈ 13 ರಂದು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಜುಲೈ 17 ರಂದು ಕರೆ ಮಾಡಿದ್ದ ಆರೋಗ್ಯ ಸಿಬ್ಬಂದಿ, ನಿಮ್ಮ ಕೋವಿಡ್ ವರದಿ ಪಾಸಿಟಿವ್ ಬಂದಿದೆ, ಆ್ಯಂಬುಲೆನ್ಸ್ ಬರುತ್ತೆ ಸಿದ್ಧವಾಗಿರಿ ಎಂದು ತಿಳಿಸಿದ್ದರು. ಪರೀಕ್ಷೆಗೊಳಗಾದ ವ್ಯಕ್ತಿ ಸಂಜೆಯವರೆಗು ಕಾದರೂ ಆ್ಯಂಬುಲೆನ್ಸ್ ಬಂದಿರಲಿಲ್ಲ. ಕೊನೆಗೆ ಸಂಜೆ ಮತ್ತೆ ಕರೆ ಮಾಡಿದ ಆರೋಗ್ಯ ಸಿಬ್ಬಂದಿ ನಿಮ್ಮ ವರದಿಯೇ ಬಂದಿಲ್ಲವೆಂದು ಹೇಳಿದ್ದಾರೆ. ಇದರಿಂದ ಗೊಂದಲಕ್ಕೊಳಲಾಗಿರುವ ವ್ಯಕ್ತಿ ಮುಂಜಾಗೃತೆಯಿಂದ ಈಗ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
ಇದೀಗ ಈ ವ್ಯಕ್ತಿಗೆ ಕೊರೊನಾ ಸೋಂಕು ಇದೆಯೋ, ಇಲ್ಲವೋ ಎಂಬ ಆತಂಕ ಸ್ಥಳೀಯರಲ್ಲಿ ಶುರುವಾಗಿದೆ. ವರದಿ ಬಂದ ಬಳಿಕವಷ್ಟೇ ನಿಖರ ಮಾಹಿತಿ ತಿಳಿಯಲಿದೆ. ಸದ್ಯಕ್ಕೆ ಆರೋಗ್ಯ ಸಿಬ್ಬಂದಿ ನೀಡಿರುವ ಮಾಹಿತಿಯಿಂದ ಇವರು ಗಲಿಬಿಲಿಗೊಂಡಿದ್ದಾರೆ. ಈ ನಡುವೆ ಸ್ಥಳೀಯ ಆಶಾ ಕಾರ್ಯಕರ್ತೆಯರು ಇವರ ಮನೆಗೆ ಆಗಮಿಸಿ ಹೋಂ ಕ್ವಾರಂಟೈನ್ ಸೀಲ್ ಹಾಕಿ ಹೋಗಿದ್ದಾರೆ.