ಹುಬ್ಬಳ್ಳಿ: ಬಿಜೆಪಿ ಸರ್ಕಾರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸಿಲ್ಲ. ಒಬ್ಬರು ಅತ್ತ ಹಾಗೆ ಮಾಡಿದರೆ ಮತ್ತೊಬ್ಬರು ಹೊಡೆದ ಹಾಗೆ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಕೇವಲ ಘೋಷಣೆಗೆ ಮಾತ್ರ ಸೀಮಿತ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಟೀಕಿಸಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿ, ಲಕ್ಷ್ಮೇಶ್ವರಕ್ಕೆ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ. ಪಂಚ ರತ್ನಕ್ಕೆ ಹೋದ ಕಡೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಜನವರಿ 3 ರಿಂದ ಬೀದರ್ ಭಾಗದಲ್ಲಿ ಕಾರ್ಯಕ್ರಮ ಆರಂಭವಾಗುತ್ತದೆ ಎಂದರು.
ಚಳಿಗಾಲ ಅಧಿವೇಶನದಲ್ಲಿ ಭಾಗಿಯಾಗಲ್ಲ: ಫೆಬ್ರವರಿ ತಿಂಗಳಲ್ಲಿ ಬೆಳಗಾವಿ ಭಾಗದಲ್ಲಿ ಪಂಚರತ್ನ ಕಾರ್ಯಕ್ರಮ ಆರಂಭ ಮಾಡಲಾಗುತ್ತದೆ. ಪಂಚರತ್ನ ಯಾತ್ರೆಗೆ ಸಮಯ ನಿಗದಿಯಾಗಿದೆ. ಹಾಗಾಗಿ ನಾನು ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸುತ್ತಿಲ್ಲ. ನಮ್ಮ ಅನುಪಸ್ಥಿತಿಯಲ್ಲಿ ಬಂಡೆಪ್ಪ ಕಾಶಂಪೂರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ ಎಂದು ತಿಳಿಸಿದರು.
ಬೆಳಗಾವಿ ಗಡಿ ವಿವಾದ ಕುರಿತು ಪ್ರತಿಕ್ರಿಯಿಸಿದ ಅವರು, ಕರ್ನಾಟಕ ಮತ್ತು ಮಹಾರಾಷ್ಟ್ರ ಬಿಜೆಪಿ ನಾಯಕರು ವಿಷಯ ಡೈವರ್ಟ್ ಮಾಡುತ್ತಿದ್ದಾರೆ. ಗಡಿ ವಿವಾದ ಮುಗಿದು ಹೋದ ಅಧ್ಯಾಯ ಎಂದು ಹೇಳಿದರು.
ಸಿದ್ದರಾಮಯ್ಯ ಬಸ್ ಯಾತ್ರೆ ವಿಚಾರವಾಗಿ ಮಾತನಾಡಿ, ಅವರು ಎಲ್ಲಿಂದಲೋ ಸ್ಟಾರ್ಟ್ ಮಾಡಲಿ, ಅದು ಅವರವರ ಪಕ್ಷದ ವಿಚಾರ, ನಾನು ಯಾಕೆ ಚರ್ಚೆ ಮಾಡಲಿ ಎಂದು ಟಾಂಗ್ ನೀಡಿದರು. ನಾವು ಈ ಬಾರಿ 123 ರಿಂದ 130 ಸೀಟ್ ಗೆಲ್ಲುತ್ತೇವೆ. ರಾಜ್ಯದ ಯಾವ ಪಕ್ಷದ ನಾಯಕರು ನನ್ನ ಸಂಪರ್ಕದಲ್ಲಿ ಇಲ್ಲ ಎಂದರು.
ಕೆಸಿಆರ್ ನಮಗೆ ಬೆಂಬಲ ಕೊಡುತ್ತಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಲು ಗಡಿ ಭಾಗದಲ್ಲಿ ನಮಗೆ ಸಪೋರ್ಟ್ ಮಾಡುತ್ತಿದ್ದಾರೆ. ಅವರ ಪಕ್ಷದ ಶಾಸಕರು ನಮಗೆ ಬೆಂಬಲ ಕೊಡ್ತೀನಿ ಎಂದಿದ್ದಾರೆ. ಜನಾರ್ದನ ರೆಡ್ಡಿ ಜೊತೆಗೆ ಮಾತುಕತೆ ಆಗಿಲ್ಲ. ಯಾರ ಜೊತೆಗೂ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ನಾವು ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕೆನ್ನುವ ಗುರಿ ನಮಗಿದೆ ಎಂದು ಹೇಳಿದರು.
ಇದನ್ನೂ ಓದಿ: ಗುಜರಾತ್ನಲ್ಲಿ ಕಾಂಗ್ರೆಸ್ ಸೋಲಿಗೆ ಮೋದಿ ಮ್ಯಾಜಿಕ್ ಅಲ್ಲ, ಆಪ್ ಕಾರಣ: ಸತೀಶ್ ಜಾರಕಿಹೊಳಿ