ಹುಬ್ಬಳ್ಳಿ : ಆರ್ಥಿಕ ಹಿಂಜರಿತದಿಂದ ಬಸವಳಿದಿದ್ದ ಸಣ್ಣ ಕೈಗಾರಿಕೆಗಳು ಕೊರೊನಾ ಹೊಡೆತಕ್ಕೆ ಮತ್ತಷ್ಟು ಪಾತಾಳಕ್ಕಿಳಿದಿವೆ. ಧಾರವಾಡದಲ್ಲಿರುವ ಸುಮಾರು 3 ಸಾವಿರ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು (ಎಂಎಸ್ಎಂಇ) ನಲುಗಿದ್ದು, ಸಣ್ಣಪುಟ್ಟ ಕೈಗಾರಿಕೆಗಳು ಬಾಗಿಲು ಹಾಕಿವೆ.
ಲಾಕ್‌ಡೌನ್‌ನಿಂದ ಕೆಲಸ ಇಲ್ಲದೆ ಈ ಕೈಗಾರಿಕೆಗಳ ಮಾಲೀಕರು ತಲೆ ಮೇಲೆ ಕೈಹೊತ್ತು ಕುಳಿತ್ತಿದ್ರೆ, ಕಾರ್ಮಿಕರಿಗೆ ದಿಕ್ಕುದೆಸೆ ಇಲ್ಲದಂತಾಗಿದೆ. ಈ ಹಿಂದಿನ ಕೆಲಸದ ಬಿಲ್‌ಗಳು ಬಾಕಿ ಉಳಿದಿರುವುದು ಒಂದೆಡೆಯಾದ್ರೆ, ಬ್ಯಾಂಕ್ಗಳಿಂದ ಪಡೆದ ಸಾಲದ ಬಡ್ಡಿ, ವಿದ್ಯುತ್ ಬಿಲ್, ನಗರಸಭೆ, ವಾಣಿಜ್ಯ ಇಲಾಖೆಗೆ ತೆರಿಗೆ ಪಾವತಿಸುವ ತೂಗುಗತ್ತಿ ಮಾಲೀಕರನ್ನು ಕಾಡುತ್ತಿದೆ.
ಆಹಾರೋತ್ಪನ್ನ, ಕೃಷಿ ಆಧಾರಿತ ಉತ್ಪನ್ನಗಳ ತಯಾರಿಕೆ ಹಾಗೂ ಜವಳಿ ಉದ್ಯಮ ಕೋವಿಡ್ ಹೊಡೆತದಿಂದ ಬೇಗ ಹೊರ ಬಂದಿವೆ. ಬಿಡಿಭಾಗಗಳ ತಯಾರಿಕೆ ಹಾಗೂ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ಹೆಚ್ಚಿನ ಪ್ರಗತಿ ಕಾಣುತ್ತಿದೆ.
ಈ ಕೈಗಾರಿಕೆಗಳಲ್ಲಿ ಆದ ಬದಲಾವಣೆ ಎಲ್ಲಾ ಕೈಗಾರಿಗಳ ಮೇಲೂ ಆಶಾಭಾವನೆ ಹೆಚ್ಚಿಸಿದೆ. ಕೇಂದ್ರ ಸರ್ಕಾರ ಘೋಷಿಸಿರುವ ವಿಶೇಷ ಪ್ಯಾಕೇಜ್ನಂತೆ ಜಿಎಸ್‌ಟಿ, ತೆರಿಗೆಯಿಂದ ವಿನಾಯಿತಿ ಹಾಗೂ ಕೈಗಾರಿಕೆ ಕ್ಷೇತ್ರದ ಪ್ರಗತಿಗೆ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕಿದೆ ಎಂಬ ಒತ್ತಾಯವೂ ಕೇಳಿ ಬರುತ್ತಿದೆ.