ಧಾರವಾಡ: ದೇಶದ ಆರ್ಥಿಕ ಪರಿಸ್ಥಿತಿಯು ಬಾಂಗ್ಲಾದೇಶ ಹಾಗೂ ಶ್ರೀಲಂಕಾಕ್ಕಿಂತ ಕೆಳಮಟ್ಟದಲ್ಲಿದೆ. ಕೃಷಿ, ಆಟೊಮೋಬೈಲ್, ಸಣ್ಣ ಕೈಗಾರಿಕೆ, ಐಟಿ ಸೇರಿದಂತೆ ಎಲ್ಲವೂ ಬಿದ್ದು ಹೋಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.
ನಗರದ ಸರ್ಕಿಟ್ ಹೌಸ್ ನಲ್ಲಿ ಮಾಧ್ಯಮದವರೊಂದಿಗೆ ಅವರು, ನಾರಾಯಣಮೂರ್ತಿ ಅವರ ಇನ್ಫೋಸಿಸ್‌ನಲ್ಲೇ ಹತ್ತು ಸಾವಿರ ಉದ್ಯೋಗ ಕಡಿತ ಆಗಿವೆ. ಬಿಎಸ್ಎನ್‌ಎಲ್ ಇನ್ನು ಶೇಕಡಾ ಹತ್ತರಷ್ಟು ಮಾತ್ರ ಉಳಿದಿದೆ. ಏರ್ ಇಂಡಿಯಾ ಖರೀದಿಸೋರೆ ಇಲ್ಲ, ಹೆಚ್.ಎ.ಎಲ್‌ನವರು ಮುಷ್ಕರ ಮಾಡಿದ್ರೂ ಕೇಳೋರಿಲ್ಲ ಹೇಳೋರಿಲ್ಲ. ಒಟ್ಟಾರೆ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಭ್ರಷ್ಟಾಚಾರ ಮುಕ್ತ ಭಾರತ ಮಾಡುತ್ತೇವೆ ಅಂತಾ ಮೋದಿ ಹೇಳಿದ್ರು, ಈಗ ಆ ಬಗ್ಗೆ ಮಾತನಾಡುವುದೇ ಅವರಿಗೇ ಕಷ್ಟವಾಗಿದೆ ಎಂದರು.
ಹೆಚ್.ಡಿ.ಡಿ. ಸಿಎಂ ಆಗೋವಾಗ ರಚನೆಯಾಗಿದ್ದ ತೃತೀಯ ರಂಗ ನೇಪಥ್ಯ ವಿಚಾರಕ್ಕೆ ಮಾತನಾಡಿದ ಅವರು, ಅದರ ಬಗ್ಗೆ ನಾನೇನು ಈಗ ಕವಡೆ ಹಾಕಿ ಹೇಳಲಾ? ಇದೇ 19ಕ್ಕೆ ಬೆಳಗಾವಿಗೆ ಬರಲಿದ್ದೇನೆ. ಆಗ ಪಕ್ಷ ಸಂಘಟನೆ ಬಗ್ಗೆ ಮುಖಂಡರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.
ಇನ್ನು, ಹುಬ್ಬಳ್ಳಿಯ ಕೆಎಲ್ಇ ಕಾಲೇಜಿನಲ್ಲಿ ದೇಶದ್ರೋಹಿ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ದೇವೇಗೌಡರು, ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಮೂವರು ಆರೋಪಿಗಳ ಬಿಡುಗಡೆ ಕುರಿತು ಕೋರ್ಟ್ನಲ್ಲಿ ಏನು ಮಾಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಸರ್ಕಾರ ಬಿಜೆಪಿ ಇದೆ, ಇಲ್ಲಿ ಸಚಿವರು ಬಿಜೆಪಿಯವರೇ ಇದ್ದಾರೆ. ವಕೀಲರು ಅಪಿಯರ್ ಆಗಬಾರದು ಅಂತಾ ನಿರ್ಣಯ ತೆಗೆದುಕೊಂಡಿದ್ದಾರೆ. ಹೇಗೆ ರಿಲೀಸ್ ಆದ್ರು ಅಂದ್ರೆ ನಾನು ಏನು ಹೇಳಲಿ ಎಂದು ಪ್ರಶ್ನಿಸಿದರು.