ಹುಬ್ಬಳ್ಳಿ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಮರಳಿರುವ ಯೋಧರನ್ನು ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿ ಸನ್ಮಾನಿಸಲಾಯಿತು.
ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಮಾರುತಿ ಬಂಡಿವಡ್ಡರ್ ಮತ್ತು ಯಲ್ಲಾಪುರ ತಾಲೂಕಿನ ಮುಂಡಗೋಡದ ಸೋಮಶೇಖರ್ ಅಗಡಿ ಎಂಬುವವರು 18 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ.
ದೇಶದ ಜಮ್ಮು ಕಾಶ್ಮೀರ, ಸಿಯಾಚಿನ್, ಕೇರಳ, ಅಸ್ಸೋಂ ಮತ್ತು ಹಲವು ಭಾಗಗಳಲ್ಲಿ ಕರ್ತವ್ಯ ಮುಗಿಸಿ ನಿವೃತ್ತರಾಗಿ ತಮ್ಮ ತವರಿಗೆ ಆಗಮಿಸಿದ ಇವರನ್ನು ಭಾರತೀಯ ಜನತಾ ಪಕ್ಷ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಬರಮಾಡಿಕೊಂಡು ಸನ್ಮಾನಿಸಿ ಗೌರವಿಸಿದರು.