ಹುಬ್ಬಳ್ಳಿ: ಸರ್ಕಾರದ ನಿರ್ದೇಶನದಂತೆ ಹುಬ್ಬಳ್ಳಿ ತಾಲೂಕು ಆಡಳಿತ ವತಿಯಿಂದ, ತಹಶೀಲ್ದಾರ್ ಶಶಿಧರ ಮಾಡ್ಯಾಳ ಅಧ್ಯಕ್ಷತೆಯಲ್ಲಿ ಗೋಕುಲ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಜರುಗಿತು. ಗ್ರಾಮದ ಬಹುದಿನಗಳ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರದ ಸ್ವರ್ಶ ದೊರೆಯಿತು.
ಕೆರೆಗಳ ಸರ್ವೇ ಕಾರ್ಯ ನಡೆಸಿ ಸಂರಕ್ಷಣೆಗೆ ಮನವಿ:
![Tahsildar Shashidhar Madyala news](https://etvbharatimages.akamaized.net/etvbharat/prod-images/kn-hbl-04-grama-vastavya-av-7208089_20022021174328_2002f_1613823208_453.jpg)
ಗೋಕುಲ ಗ್ರಾಮದ ಸರ್ವೇ ನಂ 49ರ ಕುರಡಿಕೇರಿ ಹಾಗೂ ಸರ್ವೇ ನಂ 364 ರಲ್ಲಿರುವ ಚಿಕ್ಕೇರೆಗಳನ್ನು ಅನಧಿಕೃತವಾಗಿ ಒತ್ತುವರಿ ಮಾಡಿ, ಇಟ್ಟಿಗೆ ಭಟ್ಟಿಗಳನ್ನು ನಡೆಸುತ್ತಿದ್ದಾರೆ. ತ್ಯಾಜ್ಯ ಹಾಗೂ ಕಲ್ಮಷ ನೀರು ಕೆರೆಗಳಿಗೆ ಸೇರುತ್ತಿದೆ. ಕೈಗಾರಿಕೆಗಳು, ಗ್ರಾಮದ ಚರಂಡಿ ನೀರು ಕುರಡಿಕೇರಿಯನ್ನು ಸೇರಿ ಕಲುಷಿತಗೊಂಡಿದೆ. ಜಾನುವಾರುಗಳು ಕೆರೆ ನೀರು ಕುಡಿದು ಮೃತಪಟ್ಟಿವೆ. ಈ ಕುರಿತು ತಹಶೀಲ್ದಾರರು ಹಾಗೂ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ತಹಶೀಲ್ದಾರ್ ಶಶಿಧರ ಮಾಡ್ಯಾಳ, ಭೂ ದಾಖಲೆ, ಸರ್ವೇ ಇಲಾಖೆಗಳ ಅಧಿಕಾರಿಗಳೊಂದಿಗೆ ಕೆರೆಗಳಿಗೆ ತೆರಳಿ ವೀಕ್ಷಣೆ ನಡೆಸಿದರು. ಸೋಮವಾರದಿಂದಲೇ ಕೆರೆ ಸರ್ವೇ ಕಾರ್ಯ ನಡೆಸುವಂತೆ ಸೂಚಿಸಿದರು.
![Tahsildar Shashidhar Madyala news](https://etvbharatimages.akamaized.net/etvbharat/prod-images/kn-hbl-04-grama-vastavya-av-7208089_20022021174328_2002f_1613823208_511.jpg)
ಗ್ರಾಮದ ಚರಂಡಿ ನೀರು ಚಿಕ್ಕೇರೆಯಿಂದ ಹರಿದು ಹೋಗಿ ರೈತರ ಜಮೀನಿನಲ್ಲಿ ನಿಂತು ವ್ಯವಸಾಯ ಮಾಡಲು ತೊಂದರೆಯಾಗುತ್ತಿದೆ. ಇದನ್ನು ಮನಗಂಡು ಪೈಪ್ಲೈನ್ ಮೂಲಕ ಚರಂಡಿ ನೀರನ್ನು ರಾಜಕಾಲುವೆಗೆ ಸೇರಿಸಲು ಯೋಜನೆ ತಯಾರಿಸಲಾಗಿದೆ. ಟೆಂಡರ್ ಕರೆದು ಎರಡು ತಿಂಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.
ಭೂಸ್ವಾಧೀನಕ್ಕೆ ಒಳಗಾದ ಜಮೀನುಗಳ ಪೋಡಿ ಮಾಡಿಕೊಡಲು ಮನವಿ:
ರಾಷ್ಟ್ರೀಯ ಹೆದ್ದಾರಿ ಹಾಗೂ ವಿಮಾನ ನಿಲ್ದಾಣಕ್ಕಾಗಿ ಗೋಕುಲ ಗ್ರಾಮದ ರೈತರ ಜಮೀನನ್ನು ಭೂ ಸ್ವಾಧೀನಕ್ಕೆ ಒಳಪಡಿಸಿಕೊಳ್ಳಲಾಗಿದೆ. ಜಮೀನುಗಳು ಇದರಿಂದಾಗಿ ತುಂಡಾಗಿವೆ. ತುಂಡಾದ ಜಮೀನು ಪಹಣಿಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ಏರ್ ಪೋರ್ಟ್ ಅಥಾರಿಟಿ ಆಪ್ ಇಂಡಿಯಾದ ಹೆಸರು ಉಳಿದುಕೊಂಡಿವೆ. ಇದರಿಂದಾಗಿ ರೈತರು ಉಳುಮೆ ಮಾಡುತ್ತಿರುವ ತುಂಡು ಜಮೀನಿನ ಮಾಲಿಕತ್ವ ಲಭಿಸದಂತಾಗಿದೆ. ಇವುಗಳ ಪೋಡಿ ಮಾಡಿಸಲು ಕಚೇರಿಗಳಿಗೆ ಅಲೆಯುವ ಪರಿಸ್ಥಿತಿ ಒದಗಿ ಬಂದಿದೆ ಎಂದು ಗ್ರಾಮಸ್ಥರು ಮನವಿ ಮಾಡಿದರು.
![Tahsildar Shashidhar Madyala news](https://etvbharatimages.akamaized.net/etvbharat/prod-images/kn-hbl-04-grama-vastavya-av-7208089_20022021174328_2002f_1613823208_189.jpg)
ಇದಕ್ಕೆ ಸ್ಪಂದಿಸಿದ ತಹಶೀಲ್ದಾರ್, ಇಲಾಖೆಯಿಂದಲೇ ಭೂ ಸ್ವಾಧೀನಕ್ಕೆ ಒಳಪಟ್ಟ ರೈತರ ಜಮೀನುಗಳ ವಿವರ ಪಡೆದು, ಸರ್ವೇ ಕಾರ್ಯ ನಡೆಸಿ ಪೋಡಿ ಮಾಡಿಕೊಡಲಾಗುವದು ಎಂದರು.
172 ಮನೆಗಳ ಸಂಪೂರ್ಣ ಹಾನಿ ನಷ್ಟ ಪರಿಹಾರಕ್ಕೆ ಪ್ರಸ್ತಾವನೆ:
2018 ರಲ್ಲಿ ಸುರಿದ ಮಹಾಮಳೆಗೆ ಗೋಕುಲ ಗ್ರಾಮದ 5 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಇವುಗಳಿಗೆ ಭಾಗಶಃ ಹಾನಿ ಪರಿಹಾರವನ್ನು ನೀಡಲಾಗಿದೆ. ಸಂಪೂರ್ಣ ಪರಿಹಾರ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದರು.
ಮಹಾಮಳೆ 15 ದಿನಗಳ ಕಾಲ ಎಡಬಿಡದೆ ಸುರಿದಿದ್ದರಿಂದ ಒಮ್ಮೆ ಮನೆ ಹಾನಿ ಕುರಿತು ಸರ್ವೇ ಮಾಡಿ, ದಾಖಲೆಗಳನ್ನು ರಾಜೀವ್ ಗಾಂಧಿ ವಸತಿ ನಿಗಮ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ನಂತರ ಮುಂದುವರಿದ ಮಳೆಯಲ್ಲಿ ಮನೆಗಳು ಸಂಪೂರ್ಣವಾಗಿ ಹಾನಿಗೆ ಒಳಗಾಗಿವೆ. ಈ ಕುರಿತು ತಾಂತ್ರಿಕ ಕಾರಣಗಳಿಂದ ಮಾಹಿತಿ ಅಪ್ಲೋಡ್ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಭಾಗಶಃ ಪರಿಹಾರಧನ ಪಾವತಿಯಾಗಿದೆ. ಈ ರೀತಿ ನಗರ ವ್ಯಾಪ್ತಿಯಲ್ಲಿ 172 ಮನೆಗಳು ಹಾನಿಗೆ ಒಳಗಾಗಿವೆ. ಈ ಕುರಿತು ಜಿಲ್ಲಾಧಿಕಾರಿಗಳ ಮುಖಾಂತರ ರಾಜೀವ್ ಗಾಂಧಿ ವಸತಿ ನಿಗದಿ ವ್ಯವಸ್ಥಾಪಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ದೊರೆತ ಕೂಡಲೆ, ಜಿಪಿಎಸ್ ಆಧಾರಿತ ಜಂಟಿ ಸರ್ವೇ ಕಾರ್ಯ ನಡೆಸಿ ಪೂರ್ಣಪ್ರಮಾಣದ ಪರಿಹಾರ ನೀಡಲಾಗುವುದು ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಭೂಮಿ ಮಂಜೂರು:
ಗೋಕುಲ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಸರ್ಕಾರಿ ಭೂಮಿ ಮಂಜೂರು ಮಾಡಿದರೆ, ಆರೋಗ್ಯ ಇಲಾಖೆಯಿಂದ ಆಸ್ಪತ್ರೆ ತೆರೆಯಲಾಗುವುದು. ಇದಕ್ಕೆ ಭೂಮಿ ಮಂಜೂರು ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದರು. ಸರ್ಕಾರದ ಗೋಟಾನಾ ಭೂಮಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಮಂಜೂರು ಮಾಡಿ, ಆರೋಗ್ಯ ಇಲಾಖೆ ಅಥವಾ ಪಾಲಿಕೆಗೆ ಹಸ್ತಾಂತರಿಸುವುದಾಗಿ ತಹಶೀಲ್ದಾರ್ ಹೇಳಿದರು.
20 ರೂಪಾಯಿ ಬಾಂಡ್ ಪೇಪರ್ ಮೇಲೆ ಖಾಸಗಿ ಜಮೀನುಗಳಲ್ಲಿ ನಿವೇಶನ ಖರೀದಿಸಿ ಮನೆ ನಿರ್ಮಿಸಿದವರನ್ನು ಅಕ್ರಮ ಸಕ್ರಮ ಯೋಜನೆಯಡಿ ಖಾತಾ ಮಾಡಿಕೊಡಲು ಬರುವುದಿಲ್ಲ. ಜಮೀನು ಮಾಲಿಕರ ಹೆಸರಿನಲ್ಲಿ ಬಿನ್ ಷಿತ್ ಗೆ ಅರ್ಜಿ ಸಲ್ಲಿಸಬೇಕು. ನಂತರ ಭೂದಾಖಲೆಗಳಲ್ಲಿ ಕೆಜೆಪಿ ಆದರ ನಂತರ ಖಾತೆ ಮಾಡಿಕೊಡಲಾಗುತ್ತದೆ. ಇದನ್ನು ವೈಯಕ್ತಿಕವಾಗಿ ಮಾಡಿಸಿಕೊಳ್ಳಬೇಕು ಎಂದು ಗ್ರಾಮಸ್ಥರಿಗೆ ತಿಳಿಸಿದರು.
ಸ್ಮಶಾನ ಹಾಗೂ ಪರಿಶಿಷ್ಟರ ಜಮೀನಿಗೆ ತೆರಳಲು ದಾರಿ ಕಲ್ಪಿಸಲು ಮನವಿ:
ಗ್ರಾಮದಲ್ಲಿ ಸರ್ಕಾರದ ವತಿಯಿಂದ ಸ್ಮಶಾನ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗೇ ಇದರ ಪಕ್ಕದಲ್ಲಿ ಪರಿಶಿಷ್ಟರಿಗೆ ಸರ್ಕಾರದಿಂದ ನೀಡಿರುವ ಜಮೀನುಗಳಿವೆ. ಆದರೆ ಇವುಗಳಿಗೆ ತೆರಳಲು ಸಂಪರ್ಕ ರಸ್ತೆ ಇಲ್ಲ. ಸ್ಮಶಾನದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮೂರು ಜನರು ಯಾವುದೇ ಸಂಬಳ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ಇವರನ್ನು ಪಾಲಿಕೆ ವತಿಯಿಂದ ಗುತ್ತಿಗೆ ನೌಕರರನ್ನಾಗಿ ಕೆಲಸಕ್ಕೆ ತೆಗೆದುಕೊಳ್ಳುವಂತೆ ಮನವಿ ಮಾಡಲಾಯಿತು. ಈ ಕುರಿತು ಸೂಕ್ತ ಕ್ರಮ ಜರುಗಿಸಿ, ಪಾಲಿಕೆ ಆಯುಕ್ತರೊಂದಿಗೆ ಮಾತನಾಡುವುದಾಗಿ ತಹಶೀಲ್ದಾರ ಆಶ್ವಾಸನೆ ನೀಡಿದರು.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿಜಯಕುಮಾರ್ ರ್ಯಾಗಿ, ಅಪರ ತಹಶೀಲ್ದಾರ್ ವಿಜಯ್ ಕಡಕೋಳ, ಭೂ ದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕ ಎಂ.ಜಿ.ಬಂಡಾಟೆಡೆ, ಅಬಕಾರಿ ಸಬ್ ಇನ್ಸ್ಪೆಕ್ಟರ್ ಮಂಜುನಾಥ ಜಿ ಹಿರೇನಾಯ್ಕರ್, ಬಾಬಾ ಸಾಬ ಲಡಗಿ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.