ಧಾರವಾಡ: ನವರಾತ್ರಿ ಹಬ್ಬದ ಶುಭ ಸಂದರ್ಭದಲ್ಲಿ ಭಾರತದ ಸುರಕ್ಷತೆ ದೃಷ್ಠಿಯಿಂದ ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆ ಬ್ಯಾನ್ ಮಾಡಿದ್ದು ಆನಂದದಾಯಕ ವಿಚಾರ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಭಾರತದ ಸುರಕ್ಷತೆ ದೃಷ್ಠಿಯಿಂದ ಇದು ಅವಶ್ಯಕತೆ ಇತ್ತು. ನಾನು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಕಳೆದ 15 ವರ್ಷಗಳ ನಮ್ಮ ಬೇಡಿಕೆ ಈಡೇರಿದೆ. ಪಿಎಫ್‌ಐನಂತಹ ದೇಶದ್ರೋಹಿ, ಸಮಾಜ ಕಂಟಕ, ಆತಂಕಕಾರಿಯಾದ ಈ ಸಂಘಟನೆಯನ್ನು ಮೊದಲೇ ಬ್ಯಾನ್ ಮಾಡಬೇಕಿತ್ತು. ತಡವಾಗಿ ಬ್ಯಾನ್ ಮಾಡಿದರೂ, ಈ ದೇಶಕ್ಕಾಗುವ ಗಂಡಾಂತರವನ್ನು ತಡೆಯುವ ಕೆಲಸ ಮಾಡಿದಂತಾಗಿದೆ ಎಂದರು.
ಮುಸ್ಲಿಂ ಸಮಾಜ ಇದರಿಂದ ಪಾಠ ಕಲಿಯಬೇಕು. ತಮ್ಮ ಸಮಾಜದ ಯುವಕರು ಯಾವ ದಿಕ್ಕಿನತ್ತ ಹೋಗುತ್ತಿದ್ದಾರೆ ಎಂಬುದನ್ನು ಮುಸ್ಲಿಂ ಸಮಾಜದ ಹಿರಿಯರು ತಿಳಿದುಕೊಳ್ಳಬೇಕು. ದೇಶದ್ರೋಹಿ ಚಟುವಟಿಕೆ ಮಾಡಿದಾಗ ಸರ್ಕಾರ, ಪೊಲೀಸರ ಗಮನಕ್ಕೆ ತರಬೇಕು ಎಂಬುದನ್ನು ಅವರು ತಿಳಿದುಕೊಳ್ಳಬೇಕು.
ಈ ದೇಶಕ್ಕೆ ಇವರು ಬದ್ಧರಾಗಿರಬೇಕು. ದೇಶದ್ರೋಹ ಮಾಡುವಂತ ವಿಕೃತ ಮನಸ್ಸುಳ್ಳ ಯುವಕರನ್ನು ತಡೆಯಬೇಕು. ಇದನ್ನು ಮುಸ್ಲಿಂ ಸಮಾಜದ ಮುಖಂಡರೇ ಮಾಡಬೇಕು. ಮುಸ್ಲಿಂರು ಮಾನಸಿಕತೆ ಬದಲಾವಣೆ ಮಾಡುವ ಪ್ರಕ್ರಿಯೆ ಮದರಸಾಗಳಲ್ಲೂ ಆಗಬೇಕು ಎಂದು ಪ್ರಮೋದ್ ಮುತಾಲಿಕ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ: Big News: ಪಿಎಫ್ಐಗೆ ಕೇಂದ್ರದ ಅಂಕುಶ.. ಸಂಘಟನೆ ನಿಷೇಧಿಸಿ ಮಹತ್ವದ ಆದೇಶ