ಹುಬ್ಬಳ್ಳಿ: ಗ್ಯಾರಂಟಿ ಯೋಜನೆಯಲ್ಲಿ ಸಾಕಷ್ಟು ಸಾಧನೆ ಮಾಡಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಈಗ ನಿಲ್ದಾಣದ ನವೀಕರಣ ಮಾಡುವ ಕೆಲಸಕ್ಕೆ ಕೈ ಹಾಕಿದೆ. ಜನದಟ್ಟಣೆಗೆ ಅನುಗುಣವಾಗಿ ವಿನೂತನ ರೀತಿಯಲ್ಲಿ ನವೀಕರಣ ಮಾಡಲು ಮುಂದಾಗಿದ್ದು, ಸರ್ಕಾರದಿಂದ ಅನುಮೋದನೆ ಕೂಡ ದೊರೆತಿದೆ.
ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿಯ ಗೋಕುಲ ರಸ್ತೆಯ ಬಸ್ ನಿಲ್ದಾಣ ಹಾಗೂ ಧಾರವಾಡದ ನಗರ ಸಾರಿಗೆ ಬಸ್ ನಿಲ್ದಾಣದ ನವೀಕರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನವೀಕರಣ ಮಾಡಲಾಗುತ್ತಿದೆ. ಹುಬ್ಬಳ್ಳಿಯ ಗೋಕುಲ್ ರಸ್ತೆಯ ಬಸ್ ನಿಲ್ದಾಣವನ್ನು 23 ಕೋಟಿ ರೂಪಾಯಿ ವೆಚ್ಚದಲ್ಲಿ ಹಾಗೂ ಧಾರವಾಡದ ನಗರ ಸಾರಿಗೆ ಬಸ್ ನಿಲ್ದಾಣವನ್ನು 13 ಕೋಟಿ ವೆಚ್ಚದಲ್ಲಿ ನವೀಕರಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದ ಬೆನ್ನಲ್ಲೇ ಈಗ ಅನುಮೋದನೆ ದೊರೆತಿದೆ. ಈ ನಿಟ್ಟಿನಲ್ಲಿ ಸಾರಿಗೆ ಸಂಸ್ಥೆ ಜನರ ಅಗತ್ಯಕ್ಕೆ ಅನುಗುಣವಾಗಿ ಬಸ್ ನಿಲ್ದಾಣದ ನವೀಕರಣ ಮಾಡಲಾಗುತ್ತಿದೆ.
ಇನ್ನು ಗ್ಯಾರಂಟಿಯ ಶಕ್ತಿ ಯೋಜನೆಯಿಂದ ಜನರ ಓಡಾಟ ಹೆಚ್ಚಾಗಿದೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಮೂಲಭೂತ ಸೌಕರ್ಯಗಳು ಇಲ್ಲ. ಆಸನ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ವಿಶ್ರಾಂತಿ ಕೊಠಡಿ, ಲಗೇಜ್ ರೂಂ ಸೇರಿದಂತೆ ಅತ್ಯಗತ್ಯ ಮೂಲಭೂತ ಸೌಕರ್ಯಗಳ ಜೊತೆಗೆ ಚಾಲಕರು ಹಾಗೂ ನಿರ್ವಾಹಕರು ವಿಶ್ರಾಂತಿಗಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವ ಯೋಜನೆ ಇದೆ. ಈಗಿರುವ ಕಟ್ಟಡದ ಕೆಲ ಭಾಗ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಮಳೆಗಾಲದಲ್ಲಿ ಸೋರುತ್ತಿದೆ. ಹೀಗಾಗಿ ಎರಡು ಬಸ್ ನಿಲ್ದಾಣಗಳು 36 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣವಾಗಲಿವೆ.
ಇದಲ್ಲದೆ ಬಸ್ ಓಡಾಟಕ್ಕೆ ಸೂಕ್ತ ಪ್ಲಾಟ್ ಫಾರಂ, ಆನ್ಲೈನ್ ಬುಕ್ಕಿಂಗ್ಗಾಗಿ ಅಧುನಿಕ ತಂತ್ರಜ್ಞಾನ ಬಳಸಿಕೊಳ್ಳುವ ಚಿಂತನೆ ಇದೆ. ನವೀಕರಣ ಟೆಂಡರ್ ಪ್ರಕ್ರಿಯೇ ಅಂತಿಮ ಹಂತದಲ್ಲಿದ್ದು, ಡಿಸೆಂಬರ್ ಒಳಗೆ ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಕೆಲವು ದಿನಗಳಲ್ಲಿಯೇ ನವೀಕರಣ ಕಾಮಗಾರಿ ಆರಂಭಗೊಳ್ಳಲಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್ ಮಾಹಿತಿ ನೀಡಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಸಾರ್ವಜನಿಕ ಸಾರಿಗೆಯನ್ನು ಮತ್ತಷ್ಟು ಪ್ರಯಾಣಿಕ ಸ್ನೇಹಿಯಾಗಿಸಲು ಹಾಗೂ ನಗದು ರಹಿತ ವ್ಯವಹಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಯುಪಿಐ ಮೂಲಕ ಟಿಕೆಟ್ ಪಡೆಯುವ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ.
ಇದನ್ನೂ ಓದಿ: ರಾಯಚೂರು: ಸಾರಿಗೆ ಬಸ್ ನಿಲುಗಡೆಗೆ ಆಗ್ರಹಿಸಿ ವಿದ್ಯಾರ್ಥಿಗಳು, ಗ್ರಾಮಸ್ಥರಿಂದ ಪ್ರತಿಭಟನೆ