ಹುಬ್ಬಳ್ಳಿ : ಕಾಂಗ್ರೆಸ್ ಪಾರ್ಟಿ ದೇಶದ ಜನತೆಯನ್ನು ದಾರಿ ತಪ್ಪಿಸುತ್ತಿದೆ. ಸುಳ್ಳು ಹೇಳುವ ಪಾರ್ಟಿ ಎಂದರೆ ಅದು ಕಾಂಗ್ರೆಸ್. ಕಾಂಗ್ರೆಸ್ ಪಕ್ಷ ಸುಳ್ಳು ಹೇಳುವ ಅತಿ ಕೆಳಮಟ್ಟದ ರಾಜಕೀಯ ಪಕ್ಷ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಎಂದು ಕಿಡಿಕಾರಿದರು.
ನಗರದಲ್ಲಿಂದು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹಾಗೂ ದೇಶದಲ್ಲಿ ಕಾಂಗ್ರೆಸ್ ಅತಿ ಹೀನ ಸ್ಥಿತಿಯಲ್ಲಿ ರಾಜಕೀಯ ಮಾಡುತ್ತಿದೆ. ಅಲ್ಲದೇ 130 ಕೋಟಿ ಜನತೆಗೆ ಮೋಸ ಮಾಡುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಸಂಬಂಧ ಲಕ್ಷಾಂತರ ಜನರು ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ. ಅಲ್ಲದೇ ಭಾರತ ದೇಶದ ಜನತೆ ಸರ್ವಾನುಮತದಿಂದ ಪೌರತ್ವ ತಿದ್ದುಪಡಿ ಯನ್ನು ಸ್ವಾಗತಿಸುತ್ತಿದೆ. ಆದರೆ ಕಾಂಗ್ರೆಸ್ ಸುಳ್ಳು ಆರೋಪ ಮಾಡಿ ಜನರಿಗೆ ದಾರಿ ತಪ್ಪಿಸುತ್ತಿದೆ ಎಂದರು.
ಮುಸ್ಲಿಂ ಸಮುದಾಯದವರು ಕೂಡ ಸಿಎಎ ಹಾಗೂ ಎನ್.ಆರ್.ಸಿಯನ್ನು ಬೆಂಬಲಿಸಿದ್ದಾರೆ. ಸಂಸದ ಅನಂತಕುಮಾರ ಹೆಗಡೆ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮುಸ್ಲಿಂ ಸಮುದಾಯದ ವೋಟ್ಗಳು ಬೇಡ ಎಂದು ಯಾವುದೋ ಒಂದು ವಿಚಾರದಲ್ಲಿ ಹೇಳಿರಬಹುದು. ಆದರೆ ನಮಗೆ ಎಲ್ಲರ ವೋಟ್ಗಳು ಬೇಕು ಎಂದು ಹೇಳಿದರು.
ಬಳಿಕ ಮಾತನಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮಂಗಳೂರು ಪ್ರಕರಣವನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಈಗಾಗಲೇ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರು ಅವರನ್ನು ಬಂಧಿಸಬೇಕು ಮತ್ತು ಶಿಕ್ಷಿಸಬೇಕು. ಬಾಂಬ್ ಪತ್ತೆ ಮಾಡಿ ಯಾವುದೇ ಅವಘಡ ಸಂಭವಿಸದಂತೆ ಕಾರ್ಯನಿರ್ವಹಿಸಿರುವ ಪೊಲೀಸರ ಕಾರ್ಯ ನಿಜಕ್ಕೂ ಅಭಿನಂದನಾ ಪೂರ್ವಕವಾಗಿದೆ ಎಂದರು.
ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿರುವುದು ಖಂಡನೀಯವಾಗಿದೆ. ಇಂತಹ ಹೇಳಿಕೆಗಳು ಪೊಲೀಸ್ ಇಲಾಖೆಯನ್ನು ಅಧೈರ್ಯ ಮಾಡುವಂತದ್ದಾಗಿದೆ. ಕುಮಾರಸ್ವಾಮಿಯವರು ದೇಶದ ಭದ್ರತೆಗೆ ಚ್ಯುತಿ ತರುವಂತ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ಹೇಳಿದರು.