ಹುಬ್ಬಳ್ಳಿ: ಕಿಮ್ಸ್ ಆವರಣ ಅಂದ್ರೆ ಎಲ್ಲರಿಗೂ ಬೇಸರ ಮೂಡಿಸುವ ದಿನಮಾನವೊಂದಿತ್ತು. ಆದರೆ ಈಗ ಈ ಆವರಣ ಪರಿಸರ ಪ್ರೇಮಿಗಳ ಹಾಟ್ ಫೆವರೆಟ್ ತಾಣವಾಗಿದೆ. ಉದ್ಯಾನ ಸಿಬ್ಬಂದಿಯ ಶ್ರದ್ಧೆಯಿಂದ ಈಗ ಕಿಮ್ಸ್ ಆಸ್ಪತ್ರೆ ಮಾತ್ರ ಆಗಿರದೆ ಉದ್ಯಾನವನವೂ ಆಗಿದೆ.
ಹೌದು, ಕಿಮ್ಸ್ ಅಂಗಳದಲ್ಲಿ ವೈವಿಧ್ಯಮಯ ಹೂಗಳು, ವಿಭಿನ್ನ ಬಗೆಯ ಗುಲಾಬಿ ಗಿಡಗಳು ಕಂಗೊಳಿಸುತ್ತಿವೆ. ಖಾಲಿ ಬಿದ್ದಿದ್ದ ಜಾಗದಲ್ಲಿ ಈಗ ‘ಹೂ ನಗೆ’ ಅರಳಿದೆ. ಪರಿಸರ ಪ್ರೇಮಿಗಳು ಹಾಗೂ ರೋಗಿಗಳ ಸಂಬಂಧಿಕರಿಗೆ ಆಹ್ಲಾದಕರ ವಾತಾವರನ್ನುಂಟು ಮಾಡುತ್ತದೆ.
ಕಾಲಕಾಲಕ್ಕೆ ಗೊಬ್ಬರ, ಔಷಧ ಸಿಂಪಡಣೆ, ಪೋಷಣೆ, ನೀರು ಹಾಕಿ ರಕ್ಷಿಸುತ್ತಿರುವ ಉದ್ಯಾನದ ಆರು ಜನರ ತಂಡ ಆಸ್ಪತ್ರೆಗೆ ಬರುವ ಸಾರ್ವಜನಿಕರು, ವೈದ್ಯರು, ವೈದ್ಯ ವಿದ್ಯಾರ್ಥಿಗಳಿಗೆ ಸುಂದರ ವಾತಾವರಣ ನಿರ್ಮಿಸಿಕೊಟ್ಟಿದೆ. ನಿರ್ವಹಣೆ ಕೊರತೆಯಿಂದ ವರ್ಷದಿಂದ ಬಾಡಿದ್ದ ಹೂ ಹಾಗೂ ಗಿಡಗಳಿಗೆ ಹೊಸ ಚೈತನ್ಯ ತಂದುಕೊಟ್ಟಿದ್ದಾರೆ. ಒಂದೂವರೆ ಎಕರೆಯಲ್ಲಿ ಬೆಳೆದ ಒಂಬತ್ತು ಜಾತಿಯ ಗುಲಾಬಿ ಹೂಗಳು ಆಕರ್ಷಿಸುತ್ತಿವೆ.
ಪುಣೆಯಿಂದ ಉತ್ತಮ ತಳಿಯ ಗುಲಾಬಿ ಸಸಿಗಳನ್ನು ತಂದು ನೆಡಲಾಗಿದ್ದು, ಚೆನ್ನಾಗಿ ಹೂ ಬಿಟ್ಟಿವೆ. ಡಿಸೆಂಬರ್ ಅಂತ್ಯಕ್ಕೆ ಇತರೆ ಜಾತಿಯ ಮತ್ತಷ್ಟು ಗುಲಾಬಿ ಸಸಿಗಳನ್ನು ನಡುವ ಗುರಿ ಹೊಂದಲಾಗಿದೆಯಂತೆ.
ಮೊದಲು ಉದ್ಯಾನದ ಮೂಲೆ ಗಳಲ್ಲಿ ಗುಟ್ಕಾ ತಿಂದು ಉಗುಳಿದ ತ್ಯಾಜ್ಯವನ್ನಷ್ಟೇ ನೋಡುತ್ತಿದ್ದೆವು. ಈಗ ಹೂದೋಟ, ಸ್ವಚ್ಛತೆಯ ವಾತಾವರಣ ನೋಡಿ ಆಸ್ಪತ್ರೆಗೆ ಬರುವವರಿಗೆ ಖುಷಿಯಾಗಿದೆ. ಕಿಮ್ಸ್ ಆವರಣದಲ್ಲಿ ಒಂಬತ್ತು ಜಾತಿಯ 1,200ಕ್ಕೂ ಹೆಚ್ಚು ಗುಲಾಬಿ ಸಸಿಗಳನ್ನು ನೆಟ್ಟಿದ್ದು, ನಾಲ್ಕು ತಿಂಗಳಲ್ಲೇ ಸಾಕಷ್ಟು ಹೂಗಳು ಅರಳಿ ನಿಂತಿವೆ. ಗಿಡ್ಡ ಮಾರಿಗೋಲ್ಡ್, ಕಾಸ್ಮಿಯಾ, ಬಟ್ಟಲು ಹೂ, ಡಾಲಿಯಾ, ಬಾಲ್ಸಂ, ಗೆಲಾಡಿಯಾದಂತಹ ಬೇರೆ 30ಕ್ಕೂ ಹೆಚ್ಚು ವಿಧದ ಸಸಿಗಳನ್ನು ಇತರ ಭಾಗಗಳಲ್ಲಿ ನೆಟ್ಟು ಪೋಷಿಸಲಾಗುತ್ತಿದೆ.