ಧಾರವಾಡ: ನಗರದ ಜಿಲ್ಲಾಸ್ಪತ್ರೆಯನ್ನು ಮೇಲ್ದದರ್ಜೆಗೇರಿಸಲು 9 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು. ಆಸ್ಪತ್ರೆಯಲ್ಲಿ ಪ್ಲಂಬಿಂಗ್, ರಸ್ತೆ ಸುಧಾರಣೆ, ಎಲೆಕ್ಟ್ರಿಕಲ್ ಸಂಬಂಧಿಸಿದ ಕೆಲಸಗಳನ್ನು ಮಾಡಬೇಕಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಧಾರವಾಡ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ಸ್ಪೆಷಲ್ ವಾರ್ಡ್, ಆಕ್ಸಿಜನ್ ಪ್ಲಾಂಟ್ ವೀಕ್ಷಿಸಿದ ಬಳಿಕ ಮಾಧ್ಯಮದ ವರೊಂದಿಗೆ ಮಾತನಾಡಿದ ಅವರು, ಧಾರವಾಡ ನಗರದ ಜಿಲ್ಲಾ ಆಸ್ಪತ್ರೆಯನ್ನು ನವೀಕರಣಗೊಳಿಸಲು ಈ ವರ್ಷವೇ ಹಣ ಬಿಡುಗಡೆ ಮಾಡಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಅಧಿವೇಶನದಲ್ಲಿ ಆಸ್ಪತ್ರೆ ಬಗ್ಗೆ ಚರ್ಚಿಸಿದ್ದ ಸಚಿವ ಲಾಡ್: ಧಾರವಾಡ ಜಿಲ್ಲಾಸ್ಪತ್ರೆ ಬಹಳಷ್ಟು ಜನರಿಗೆ ಉತ್ತಮ ಸೇವೆ ನೀಡುತ್ತಿದೆ. ಇದರಲ್ಲಿ ವೈದ್ಯಕೀಯ ಸೇವೆಗೆ ಸಂಬಂಧಿಸಿದ ಬೇರೆ ಬೇರೆ ವಿಭಾಗಗಳನ್ನು ಅಭಿವೃದ್ಧಿ ಮಾಡಬೇಕಿದೆ. ಧಾರವಾಡ ಜಿಲ್ಲಾಸ್ಪತ್ರೆ ಬಗ್ಗೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಂತೋಷ್ ಲಾಡ್ ಅವರು ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಮಾಡಿದ್ದರು. ಅವಾಗ್ಗೆ ಈ ಜಿಲ್ಲಾಸ್ಪತ್ರೆ ಬಗ್ಗೆ ಅಂದಾಜು ಮಾಡಿಸಿದ್ದು, ಆಸ್ಪತ್ರೆಯ ಬೇರೆ ಬೇರೆ ವಿಭಾಗಳಿಗೆ ಸಂಬಂಧಿಸಿದಂತೆ ಡಿಸಿ,ಡಿಎಚ್ಒ ಜೊತೆ ಚರ್ಚಿಸಿರುವೆ.
ಏನೇನೂ ಅಗತ್ಯವಿದೆ ಇನ್ನಷ್ಟು ಪರಿಶೀಲಿಸಿ, ಬೇಗ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯ ಚೆನ್ನಾಗಿರಬೇಕು. ಹೆಚ್ಚು ವೈದ್ಯರು ಇದ್ದರೆ ಹೆಚ್ಚು ಜನರು ಆಸ್ಪತ್ರೆಗೆ ಬರುತ್ತಾರೆ. ಧಾರವಾಡ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸಿದರೆ ಜಿಲ್ಲೆಯ ಬಡ ಜನರಿಗೆ ಹೆಚ್ಚು ಪ್ರಯೋಜನ ಸಿಗುತ್ತದೆ ಎಂದು ಸಲಹೆ ನೀಡಿದರು.
ರೊಟ್ಟಿ ಪಲ್ಯ ಸವಿದ ಇಬ್ಬರು ಸಚಿವರು: ಆಸ್ಪತ್ರೆ ಆವರಣದಲ್ಲಿ ಊಟಕ್ಕೆ ಕುಳಿತಿದ್ದ ರೋಗಿ ಸಂಬಂಧಿಗಳಿಂದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ರೊಟ್ಟಿ ಕೇಳಿ ಪಡೆದು ಸವಿದರು. ಆಸ್ಪತ್ರೆಯ ತಾಯಿ ಮಗು ವಿಭಾಗದ ಬಳಿ ಮಹಿಳೆಯರು ಊಟಕ್ಕೆ ಕುಳಿತಿದ್ದರು. ಈ ವೇಳೆ ಸಚಿವರು ವಿಸಿಟ್ ಗೆ ಬಂದಿದ್ದರು.
ಈ ವೇಳೆ ಮಹಿಳೆಯರ ಬಳಿ ಹೋಗಿ ನಮಗೂ ಊಟಕ್ಕೆ ಕೊಡಿ ಎಂದು ಕೇಳಿದರು. ಈ ವೇಳೆ ಮಹಿಳೆಯರು ರೊಟ್ಟಿ ಪಲ್ಯ ಕೊಟ್ಟರು. ಬನ್ನಿ ಸರ್ ತಿನ್ನೋಣ, ಅಂತಾ ದಿನೇಶ್ ಗುಂಡೂರಾವ್ ಅವರನ್ನು ಲಾಡ್ ಕರೆದರು. ಈ ವೇಳೆ ಮಹಿಳೆಯರು ನೀಡಿದ ರೊಟ್ಟಿ ಪಲ್ಯ ಸವಿದರು. ಬದನೆಕಾಯಿ ಪಲ್ಯ ಇದ್ರೆ ಕೊಡಿ ಎಂದು ಲಾಡ್ ಕೇಳಿ ಪಡೆದರು. ಇವರೊಂದಿಗೆ ಶಾಸಕರು, ಕಾಂಗ್ರೆಸ್ ಮುಖಂಡರು ರೊಟ್ಟಿ ಪಲ್ಲೆ ಸವಿದರು.
ಇದನ್ನೂಓದಿ:ಯುವಜನತೆಯಲ್ಲಿ ಹೆಚ್ಐವಿ ಹೆಚ್ಚಳ: ಸೋಂಕಿತರಿಗಾಗಿ ವಧು-ವರರ ಸಮಾವೇಶ- ವೈದ್ಯರ ಮಾಹಿತಿ