ಹುಬ್ಬಳ್ಳಿ: ನಗರದಲ್ಲಿ ನಡೆದಿದ್ದ ಫ್ರೂಟ್ ಇರ್ಫಾನ್ನ ಭಯಾನಕ ಶೂಟೌಟ್ ಪ್ರಕರಣ ನಿತ್ಯ ಒಂದೊಂದು ಟ್ವಿಸ್ಟ್ ಪಡೆಯುತ್ತಿದೆ. ಈಗಾಗಲೇ ಈ ಹತ್ಯೆಗೆ ಮುಂಬೈ ನಂಟು ಕೂಡ ಇದೆ ಎನ್ನಲಾಗಿದೆ.
ಹಂತಕರ ಹಿಂದೆ ಬಿದ್ದಿರುವ ಪೊಲೀಸರ ಬಲೆಗೆ ಐವರು ಆರೋಪಿಗಳು ಬಿದ್ದಿದ್ದು, ಇದೀಗ ಪ್ರಕರಣ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. ಆ. 6ರಂದು ಭಯಾನಕ ಶೂಟೌಟ್ ನಡೆದಿದ್ದು, 4 ಜನ ಅಪರಿಚಿತರ ತಂಡ ಫ್ರೂಟ್ ಇರ್ಫಾನ್ ಮೇಲೆ ಹಳೇ ಹುಬ್ಬಳ್ಳಿಯ ಅಲ್ ತಾಜ್ ಹೋಟೆಲ್ ಎದುರು ದಾಳಿ ನಡೆಸಿ ಪರಾರಿಯಾಗಿದ್ದರು.
ಹಂತಕರ ಜಾಡು ಹಿಡಿದು ಹೊರಟ ಪೊಲೀಸರಿಗೆ ಶೂಟೌಟ್ ವೇಳೆ ಬಳಸಿದ್ದ ಮೂರು ಬೈಕ್, ಒಂದು ಕಾರು, ಮೂರು ಪಿಸ್ತೂಲ್ ಮತ್ತು 7 ಗುಂಡುಗಳು ಸಿಕ್ಕಿವೆ. ಐವರು ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು, ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಿದ್ದಾರೆ. ಈ ಸಂಬಂಧ ಧಾರವಾಡದ ಮಣಿಕಿಲ್ಲಾದ ಅಫ್ತಾಬ್ ಬೇಪಾರಿ, ತೌಸಿಫ್ ನಿಪ್ಪಾಣಿ, ಮೆಣಸಿನಕಾಯಿ ಓಣಿಯ ಅತಿಯಾಬ್ ಖಾನ್ ತಡಕೋಡ, ಮದಿಹಾಳ ರಸ್ತೆಯ ಮೋಹಿನ್ ಪಟೇಲ್, ಇಂಸ್ಲಾಂಪುರ ರಸ್ತೆಯ ಅಮೀರ್ ತಮಟಗಾರ ಎಂಬುವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ರೌಡಿ ಶೀಟರ್ ಫ್ರೂಟ್ ಇರ್ಫಾನ್ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ
3 ಜನರಿಗೆ 10 ಲಕ್ಷಕ್ಕೆ ಡೀಲ್ ನೀಡಲಾಗಿತ್ತು ಎನ್ನುವ ಮಾಹಿತಿ ಸದ್ಯ ಪೊಲೀಸ್ ಇಲಾಖೆಗೆ ಸಿಕ್ಕಿದೆ. ಆದ್ರೆ ಡೀಲ್ ಕೊಟ್ಟವರಾರು ಅನ್ನೋ ಬಗ್ಗೆ ತನಿಖೆ ತೀವ್ರವಾಗಿ ನಡೆಯುತ್ತಿದೆ. ಮುಂಬೈ ಮೂಲದ ಸದ್ಯ ಮೈಸೂರು ಜೈಲಿನಲ್ಲಿರುವ ಕುಖ್ಯಾತ ರೌಡಿಯೊಬ್ಬನ ಹೆಸರು ಕೊಲೆ ಹಿಂದೆ ಕೇಳಿ ಬರುತ್ತಿದೆ. ಹತ್ಯೆಗೆ ರಿಯಲ್ ಎಸ್ಟೇಟ್ ವ್ಯವಹಾರದ ದ್ವೇಷವೇ ಕಾರಣ ಎನ್ನಲಾಗಿದೆ.
ಫ್ರೂಟ್ ಇರ್ಫಾನ್ ಧಾರವಾಡದಲ್ಲಿ ಹಲವಾರು ಜನರ ಜೊತೆ ಕಿರಿಕ್ ಮಾಡಿಕೊಂಡು ಈಗಾಗಲೇ ರೌಡಿಶೀಟರ್ ಆಗಿದ್ದ ಹಿನ್ನೆಲೆ ಹತ್ಯೆಗೆ ಏನು ಕಾರಣ ಅನ್ನೋದು ಸಂಪೂರ್ಣ ತನಿಖೆಯಿಂದ ಗೊತ್ತಾಗಬೇಕಿದೆ.