ಹುಬ್ಬಳ್ಳಿ: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಶಕ್ತಿ ಯೋಜನೆಯಡಿ ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಉಚಿತ್ ಪ್ರಯಾಣ ಯೋಜನೆ ಘೋಷಣೆಯಾದ ಬಳಿಕ ಬಸ್ನಲ್ಲಿ ನಾರಿಯರ ಸಂಚಾರ ಗಣನೀಯವಾಗಿ ಏರಿಕೆಯಾಗಿದ್ದು, ಯೋಜನೆ ಯಶಸ್ವಿಯಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಬಸ್ಗಳಲ್ಲಿ ಕಳೆದ 24 ದಿನಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ 3 ಕೋಟಿ ದಾಟಿದೆ.
ಉಚಿತ ಟಿಕೆಟ್ ಮೌಲ್ಯ 80 ಕೋಟಿ ರೂ: ಜೂನ್ 11ರ ಮಧ್ಯಾಹ್ನದಿಂದ ಶಕ್ತಿ ಯೋಜನೆ ರಾಜ್ಯಾದ್ಯಂತ ಆರಂಭವಾಯಿತು. ಅಲ್ಲಿಂದ ಜುಲೈ 4ರವರೆಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಒಟ್ಟು 3.15 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದು, ಇದರ ಪ್ರಯಾಣದ ಟಿಕೆಟ್ ಮೌಲ್ಯ 80.96 ಕೋಟಿ ರೂ. ಗಳಾಗಿದೆ.
ಆರು ಜಿಲ್ಲೆಗಳಲ್ಲಿ ಪ್ರಯಾಣಿಸಿದ ಮಹಿಳೆಯರೆಷ್ಟು?: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಸೇರಿ ಆರು ಜಿಲ್ಲೆಗಳ 9 ಸಾರಿಗೆ ವಿಭಾಗಗಳ ಬಸ್ಗಳಲ್ಲಿ ಕಳೆದ 24 ದಿನಗಳಲ್ಲಿ (ಜುಲೈ 4ರವರೆಗೆ) ಒಟ್ಟು 3.15 ಕೋಟಿ ಮಹಿಳೆಯರು ಸಂಚರಿಸಿದ್ದಾರೆ. ಜುಲೈ 4ರಂದು 15 ಲಕ್ಷ 63 ಸಾವಿರದ 881 ನಾರಿಯರು ಪ್ರಯಾಣಿಸಿದ್ದಾರೆ. ಈ ಒಂದೇ ದಿನ ಉಚಿತ ಪ್ರಯಾಣದ ಟಿಕೆಟ್ ಮೌಲ್ಯ 3.89 ಕೋಟಿ ರೂ.ಗಳಾಗಿದೆ.
ಇದನ್ನೂ ಓದಿ: Free Bus: ಮಹಿಳೆಯರು ಗುರುತಿನ ಚೀಟಿಗಳ ನಕಲು ಪ್ರತಿ ತೋರಿಸಿ ಪ್ರಯಾಣಿಸಲು ಅನುಮತಿ
"ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದಿಂದ ಆರಂಭಿಸಲಾಗಿರುವ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ರಾಜ್ಯದೊಳಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ನಿರೀಕ್ಷೆಗೂ ಮೀರಿ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಸಾರ್ವಜನಿಕರ ಸಹಭಾಗಿತ್ವ ಹಾಗೂ ಸಿಬ್ಬಂದಿ ಕಾರ್ಯಕ್ಷಮತೆಯಿಂದ ಯೋಜನೆ ಯಶಸ್ವಿಯಾಗಿ ಮುಂದುವರೆದಿದೆ" ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ತಿಳಿಸಿದ್ದಾರೆ.
"ಸಂಸ್ಥೆಯಲ್ಲಿ ಲಭ್ಯವಿರುವ ಬಸ್ಗಳು ಹಾಗೂ ಮಾನವ ಸಂಪನ್ಮೂಲಗಳ ಸದ್ಭಳಕೆ ಮಾಡುವ ಮೂಲಕ ಅತ್ಯಲ್ಪ ಕಾಲದಲ್ಲಿ ಯೋಜನೆಯ ಸುಗಮ ಅನುಷ್ಠಾನ ಹಾಗೂ ಯಶಸ್ವಿಯಾಗಿ ಮುಂದುವರೆಯಲು ನೌಕರರು ಮತ್ತು ಅಧಿಕಾರಿಗಳ ಕಾರ್ಯ ಕ್ಷಮತೆ ಶ್ಲಾಘನೀಯ" ಎಂದು ವಾಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಅಭಿನಂದಿಸಿದ್ದಾರೆ.
ಶಕ್ತಿ ಯೋಜನೆ ಬಳಿಕ ಧಾರ್ಮಿಕ ಕ್ಷೇತ್ರಗಳು ಫುಲ್ ರಶ್: ಉಚಿತ ಬಸ್ ಪ್ರಯಾಣ ಯೋಜನೆ ಜಾರಿಯಾದ ಬಳಿಕ ರಾಜ್ಯದ ಪ್ರೇಕ್ಷಣೀಯ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಆಗಮಿಸುವ ಮಹಿಳೆಯರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಇದರಿಂದ ಬಸ್ಗಳು ಭರ್ತಿಯಾಗಿ ಸಂಚರಿಸುತ್ತಿವೆ. ಜೊತೆಗೆ ಧಾರ್ಮಿಕ ಕ್ಷೇತ್ರಗಳು ಕೂಡ ರಶ್ ಆಗುತ್ತಿವೆ.
ಶಕ್ತಿ ಯೋಜನೆಯಡಿ ಸಾಮಾನ್ಯ ಬಸ್ಗಳಲ್ಲಿ ಮಾತ್ರ ಉಚಿತ ಪ್ರಯಾಣ ಲಭ್ಯವಿದೆ. ಎಸಿ, ಸ್ಲೀಪರ್, ಸೆಮಿ ಸ್ಲೀಪರ್ ಹಾಗೂ ಬೇರೆ ರಾಜ್ಯಗಳಿಗೆ ಸಂಚರಿಸುವ ಬಸ್ಗಳಲ್ಲಿ ಉಚಿತ ಪ್ರಯಾಣ ಯೋಜನೆ ಲಭ್ಯವಿಲ್ಲ.
ಇದನ್ನೂ ಓದಿ: ಹಾಡು ಹಾಡುತ್ತ ಟಿಕೆಟ್ ನೀಡುವ ರಾಯಚೂರಿನ ಕಂಡಕ್ಟರ್.. ಮಹಿಳೆಯರು ಕಿಲ ಕಿಲ - ವಿಡಿಯೋ