ಹುಬ್ಬಳ್ಳಿ : ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಕೂಗು ಕೇಳಿ ಬರುತ್ತಿದೆ. ಇದರ ಬೆನ್ನಲೇ ಧಾರವಾಡ ಜಿಲ್ಲೆಯ ನಾಯಕರು ಸಿಎಂ ಗದ್ದುಗೆ ಏರಲು ಪೈಪೋಟಿ ನಡೆಸಿದ್ದಾರೆ. ಈ ರೇಸ್‌ನಲ್ಲಿ ಧಾರವಾಡ ಜಿಲ್ಲೆಯ ನಾಲ್ವರು ನಾಯಕರ ಹೆಸರು ಮುಂಚೂಣಿಯಲ್ಲಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಇದೇ ತಿಂಗಳು ಎರಡು ವರ್ಷ ಪೂರೈಸಲಿದೆ. ಅಂದೇ ಮುಖ್ಯಮಂತ್ರಿ ಬದಲಾವಣೆಯಾಗಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಧಾರವಾಡ ಜಿಲ್ಲೆಯಿಂದ ನಾಲ್ಕು ಬಿಜೆಪಿ ನಾಯಕರ ಹೆಸರುಗಳು ಈಗ ಸಿಎಂ ರೇಸ್‌ನಲ್ಲಿ ಕೇಳಿ ಬರುತ್ತಿವೆ.
ಅದರಲ್ಲಿ ಪ್ರಮುಖವಾಗಿ ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿ, ಸದ್ಯ ಕೇಂದ್ರದ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಪ್ರಲ್ಹಾದ್ ಜೋಶಿಯವರು ಮೊದಲನೇ ಸ್ಥಾನದಲ್ಲಿದ್ದಾರೆ. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದವರ ಹೆಸರು ಸಿಎಂ ಅಭ್ಯರ್ಥಿಗಳ ಪಟ್ಟಿಯಲ್ಲಿ ಸದ್ದು ಮಾಡುತ್ತಿವೆ.
ಸಂಸತ್ ಅಧಿವೇಶನ ಹಿನ್ನೆಲೆ ಸದ್ಯ ಪ್ರಲ್ಹಾದ್ ಜೋಶಿಯವರು ದೆಹಲಿಯಲ್ಲಿದ್ದಾರೆ. ರಾಜ್ಯ ಬಿಜೆಪಿಯಲ್ಲಿನ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅಲ್ಲದೆ ಬಿಜೆಪಿ ಹೈಕಮಾಂಡ್ ಜೊತೆಗೆ ಉತ್ತಮ ಬಾಂಧವ್ಯವನ್ನು ಪ್ರಲ್ಹಾದ್ ಜೋಶಿಯವರು ಹೊಂದಿದ್ದಾರೆ. ಇನ್ನು, ಇದೇ ಮೊದಲ ಬಾರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿರುವ ಜೋಶಿಯವರು, ತಮ್ಮ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿ ಬಿಜೆಪಿ ವರಿಷ್ಠರಿಂದ ಸೈ ಎನಿಸಿಕೊಂಡಿದ್ದಾರೆ.
ಇನ್ನು, ಸಚಿವ ಜಗದೀಶ್ ಶೆಟ್ಟರ್ ಈ ಹಿಂದೆ ಮುಖ್ಯಮಂತ್ರಿಯಾಗಿ ಸಾಕಷ್ಟು ಅನುಭವ ಪಡೆದ ಹಿರಿಯ ರಾಜಕಾರಣಿಯಾಗಿದ್ದಾರೆ. ಅದರ ಜೊತೆಗೆ ಲಿಂಗಾಯತ ನಾಯಕ ಎಂಬುದು ಪ್ಲಸ್ ಪಾಯಿಂಟ್ ಆಗಿದೆ. ಇವರ ನಡುವೇ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಸಚಿವ ಸಂಪುಟದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದು, ಸಿಎಂ ರೇಸ್ನಲ್ಲಿದ್ದಾರೆ.
ಸಚಿವ ಬಸವರಾಜ ಬೊಮ್ಮಾಯಿವರು ತಮ್ಮ ತಂದೆ ಎಸ್.ಆರ್.ಬೊಮ್ಮಾಯಿಯವರ ರಾಜಕೀಯ ತಂತ್ರಗಳನ್ನು ಕರಗತ ಮಾಡಿಕೊಂಡಿದ್ದಾರೆ. ಜಲಸಂಪನ್ಮೂಲ, ಗೃಹ ಇಲಾಖೆ ಸೇರಿದಂತೆ ಸಾಕಷ್ಟು ರಾಜಕೀಯ ಅನುಭವ ಪಡೆದಿರುವ ಅವರು, ಬಿ.ಎಸ್.ಯಡಿಯೂರಪ್ಪ ಅವರ ಆಪ್ತರಲ್ಲಿ ಒಬ್ಬರಾಗಿದ್ದಾರೆ.
ನಾಯಕತ್ವ ಬದಲಾವಣೆ ಸುದ್ದಿ ಮುಖ್ಯವಾಹಿನಿಗೆ ಬರುತ್ತಿದ್ದಂತೆಯೇ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಬಂದಿರುವ ಹೆಸರು ಶಾಸಕ ಅರವಿಂದ ಬೆಲ್ಲದ ಅವರದು. ಲಿಂಗಾಯತ ಸಮುದಾಯದ ಯುವ ನಾಯಕ ಎಂದು ಗುರುತಿಸುಕೊಳ್ಳುತ್ತಿರುವುದರ ಜೊತೆಗೆ ಸಿಎಂ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಬೆಲ್ಲದ್ ಅವರು, ತಮ್ಮ ತಂದೆಯವರಾದ ಚಂದ್ರಕಾಂತ ಬೆಲ್ಲದ್ ಅವರಿಂದ ಸಾಕಷ್ಟು ರಾಜಕೀಯ ಅನುಭವ ಪಡೆದಿದ್ದಾರೆ. ಅಲ್ಲದೇ ದೆಹಲಿ ನಾಯಕರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ.
ಹೀಗಾಗಿ, ಸಿಎಂ ಬದಲಾಣೆಯಾದ್ರೆ ಉತ್ತರಕರ್ನಾಟಕ ಭಾಗಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂಬ ಕೂಗು ಬಲವಾಗುತ್ತಿದೆ. ಇದರ ಮಧ್ಯೆ ಧಾರವಾಡ ಜಿಲ್ಲೆಯ ನಾಯಕರು ಮೊದಲ ಸಾಲಿನಲ್ಲಿ ಇರುವುದು ಸಾಕಷ್ಟು ಕುತೂಹಲ ಮೂಡಿಸಿದೆ.