ಧಾರವಾಡ: ಕೈಯಲ್ಲಿ ಖಡ್ಗ ಹಿಡಿದವರು ನಾವು. ಮಂತ್ರ ಹೇಳುವವರಿಗೆ ಹೆದರಬೇಕಾಗಿಲ್ಲ ಎಂದು ಸಿಎಂ ಯಡಿಯೂರಪ್ಪ ವಿರುದ್ಧ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇವರು ಬಾಯಿ ಮಾತ್ರ ಬಡಿಯೋದು, ಇವರ ಹಿಂದೆ ಮಾತನಾಡುವವರೇ ಬೇರೆ. ಹಿಂದೆ ನರೇಂದ್ರ ಮೋದಿ ಮಾತನಾಡುತ್ತಾರೆ, ಯಡಿಯೂರಪ್ಪ ಬಾಯಿ ಬಡಿಯುತ್ತಾರೆ ಎಂದು ಹರಿಹಾಯ್ದಿದ್ದಾರೆ.
ಇಲಿಗಳು ಹೊರಗೆ ಬರಲಿ ಎಂಬ ಸಂಸದ ಅನಂತ್ ಕುಮಾರ್ ಹೆಗಡೆ ಅವರ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರು ಇಲಿ ಅಂತ ನಾವೂ ನೋಡಿಕೊಳ್ಳುತ್ತೇವೆ. ಇವರೆಷ್ಟು ಧೈರ್ಯವಂತರು ಅಂತಾ ನಮಗೆ ಗೊತ್ತಿದೆ. ಮಂತ್ರ ಹೇಳುವ ಇವರಿಗೆ ಹೆದರಬೇಕಿಲ್ಲ ಎಂದು ಕಿಡಿ ಕಾರಿದರು.
ಕೇಂದ್ರ ಸಚಿವ ಅನುರಾಗ್ ಠಾಕೂರ್ ಗುಂಡು ಹಾಕಿ ಅಂತಾ ಹೇಳುತ್ತಾರೆ. ಓರ್ವ ಕೇಂದ್ರ ಸಚಿವರಾಗಿ ಈ ರೀತಿಯಾಗಿ ಹೇಳಿದ್ದಾರೆ. ಅವರು ಸರ್ಕಾರದ ಒಂದು ಭಾಗ. ಗುಂಡು ಹಾಕಿ ಅಂತಾ ಹೇಳುವ ಸರ್ಕಾರ ನಮಗೆ ಬೇಕಾ? ಎಂದು ಪ್ರಶ್ನಿಸಿದ್ದಾರೆ. ಕೇಂದ್ರ ಸಚಿವ ಸುರೇಶ್ ಅಂಗಡಿ ಕೂಡ ಗುಂಡು ಹಾಕುವ ಮಾತು ಹೇಳಿದ್ದಾರೆ. ಗುಂಡು ಹಾಕುವ ಆದೇಶದ ವಿಶೇಷ ಅಧಿಕಾರ ಕೇಂದ್ರ ಸಚಿವ ಸುರೇಶ್ ಅಂಗಡಿಗೆ ಮೋದಿ ಕೊಟ್ಟಿದ್ದಾರಾ? ಮೋದಿ ಮತ್ತು ಅಮಿತ್ ಶಾಗಿಂತ ದಡ್ಡರು ಈ ದೇಶದಲ್ಲಿ ಯಾರಕೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.