ಧಾರವಾಡ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಿದ್ದರಾವಣ, ನೀಚಣ್ಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ.
ಜಿಲ್ಲೆಯ ನವಲಗುಂದ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು, ಹಿಂದಿನಿಂದ ಕಾಂಗ್ರೆಸ್ ಭಯೋತ್ಪಾದಕರ ಪರ ನಿಂತಿದೆ. ಇಂದಿರಾ, ಸೋನಿಯಾ, ರಾಹುಲ್ ಗಾಂಧಿ ಎಲ್ಲರೂ ಭಯೋತ್ಪಾದನೆ ಪರ ಇದ್ದರು. ಈ ರಾಜ್ಯದ ಏಕೈಕ ರಾವಣ ಸಿದ್ದರಾಮಣ್ಣ ಸಹ ಅದನ್ನೇ ಮಾಡಿದ್ದು, ಅವರೂ ಸಹ ಭಯೋತ್ಪಾದಕರ ಪರ ಇದ್ದರು. ಸಿಎಂ ಆದಾಗ ಗೋ ಹಂತಕರ ಪರ ನಿಂತರು, 24 ಮಂದಿ ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ಕಣ್ಣೀರು ಹಾಕಲಿಲ್ಲ. ಶೃಂಗೇರಿಯಲ್ಲಿ ಗೋ ಹಂತಕನನ್ನು ಪೊಲೀಸರು ಗುಂಡಿಟ್ಟಿದ್ದರು. ಆಗ ಆತನ ಮನೆಗೆ ಹೋಗಿ ಕಣ್ಣೀರು ಹಾಕಿದರು ಎಂದು ಸಿದ್ದರಾಮಯ್ಯ ವಿರುದ್ಧ ಆರೋಪಿಸಿದರು.
ಹಿಂದೂ ಕಾರ್ಯಕರ್ತರ ಹಂತಕರ ವಿರುದ್ಧದ ಕೇಸ್ಗಳನ್ನು ವಾಪಸ್ ತಗೊಂಡರು. ಅದರಿಂದ ಪಿಎಫ್‌ಐ ಬೆಳೆಯಿತು. ಆದರೆ ಪಿಎಫ್‌ಐ ಬ್ಯಾನ್ ಮಾಡಿದ್ದು ನರೇಂದ್ರ ಮೋದಿ. ಕಾಂಗ್ರೆಸ್ ವಿಭಜನವಾದ ಮಾಡುತ್ತ ಬಂದಿದೆ. ನಮ್ಮ ರಾಜ್ಯದಲ್ಲಿ ಧರ್ಮ ವಿಭಜನೆಯನ್ನು ನೀಚಣ್ಣ ಸಿದ್ದರಾಮಯ್ಯ ಮಾಡಿದ್ದರು. ಕಾಂಗ್ರೆಸ್ ಗಾಂಧಿ ಟೋಪಿ ಇಟ್ಟುಕೊಂಡು ಜನರಿಗೆ ಟೋಪಿ ಹಾಕಿದೆ. ಆದರೆ ರಾಮರಾಜ್ಯ ಮಾಡಿದ್ದು ನರೇಂದ್ರ ಮೋದಿ. ಕಾಂಗ್ರೆಸ್ ಸಭೆಗಳಲ್ಲಿ ಭಾರತ ಮಾತಾ ಕೀ ಜೈ ಇರಲಿಲ್ಲ. ಈಗ ಎಲ್ಲರನ್ನೂ ಗಾಂಧಿ ಮಾಡಿದ್ದಾರೆ. ಈಗ ವಾದ್ರಾರನ್ನು ಗಾಂಧಿ ಮಾಡೋದೊಂದು ಬಾಕಿ ಇದೆ ಎಂದು ಟೀಕಿಸಿದರು.
ವಿಜಯಪುರ, ಬಾಗಲಕೋಟೆ ಮುಗಿಸಿ ನವಲಗುಂದಕ್ಕೆ ಬಂದಿದ್ದೇವೆ. ಇಡೀ ನಾಡು ಕೇಸರಿ ಅಲೆಯಾಗಿ ಪರಿವರ್ತನೆಯಾಗುತ್ತಿದೆ. ಹಳ್ಳಿ ಹಳ್ಳಿ, ಗಲ್ಲಿಗಲ್ಲಿಗಳಲ್ಲಿ ಬಿಜೆಪಿ ಧ್ವಜ ಹಾರುತ್ತಿದೆ. ಬಿಜೆಪಿ ಶಕ್ತಿಯಾಗಿ ಬೆಳೆಯುತ್ತಿದೆ. ನಮ್ಮ ಯಾತ್ರೆ 150ರ ಸಂಕಲ್ಪ ಇಟ್ಟುಕೊಂಡು ಹೊರಟಿದೆ. ಮೊಟ್ಟ ಮೊದಲ ವಿಜಯದ ಯಾತ್ರೆ ನವಲಗುಂದದಿಂದಲೇ ಪ್ರಾರಂಭವಾಗಲಿದೆ.
ವರುಣನ ಅಬ್ಬರವೂ ಇದೆ. ನಮಗೆ ವರುಣದೇವನ ಆಶೀರ್ವಾದವೂ ಇದೆ. ನಾವು ಹೋದ ಕಡೆಯೆಲ್ಲ ವರುಣ ತಂಪು ಎರೆಯುತ್ತಿದ್ದಾನೆ. ನವಲಗುಂದ ಈಗ ಕಾಂಗ್ರೆಸ್ ಮುಕ್ತ ಆಗಿದೆ. ಬಿಜೆಪಿಯ ಶಕ್ತಿ ಕೇಂದ್ರ ಆಗಿದೆ. ಜಗನ್ನಾಥರಾವ್ ಜೋಶಿಯವರ ನಾಡು ನರಗುಂದ, ಆಗಿನಿಂದ ನರಗುಂದ ಬಿಜೆಪಿ ಶಕ್ತಿ ಕೇಂದ್ರ ಆಗಿದೆ. ನರಗುಂದದ ದೃಷ್ಟಿ ಈಗ ನವಲಗುಂದದ ಮೇಲೆ ಬಿದ್ದಿದೆ ಎಂದು ತಿಳಿಸಿದರು.
ನೇಪಾಳದಲ್ಲಿ 2 ವರ್ಷದ ಹಿಂದೆ ಮಗುವಿನ ನಾಮಕರಣ ನಡೆದಿತ್ತು. ಆ ನೇಪಾಳದ ತಾಯಿ ಭಾರತ ಎಂದು ಹೆಸರಿಟ್ಟಿದ್ದರು. ಆಗ ಪತ್ರಕರ್ತರು ಆ ತಾಯಿ ಬಳಿಗೆ ಹೋಗಿದ್ದರು. ಯಾಕೆ ಪಕ್ಕದ ಭಾರತದ ಹೆಸರಿಟ್ಟಿದ್ದು ಅಂತಾ ಕೇಳಿದ್ರು? ಭೂಕುಸಿತ ಆದಾಗ ಭಾರತೀಯ ಸೈನಿಕರು ನನ್ನನ್ನು ರಕ್ಷಣೆ ಮಾಡಿದ್ದರು. ನರೇಂದ್ರ ಮೋದಿ ತಮ್ಮ ಸೈನಿಕರನ್ನು ಕಳುಹಿಸಿದ್ದರು. ಅದರಿಂದ ನಾನು ಬದುಕಿದೆ. ಹೀಗಾಗಿ ನಾನು ಭಾರತದ ಹೆಸರಿಟ್ಟಿದ್ದೇನೆ ಎಂದಿದ್ದರು.
ಕಾಶ್ಮೀರ ಲಾಲ್ ಚೌಕ್ ಮತ್ತು ಹುಬ್ಬಳ್ಳಿ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸಲು ಹೋರಾಟ ಮಾಡಬೇಕಿತ್ತು. ಆದರೆ ಇಂದು ಹುಬ್ಬಳ್ಳಿ, ಕಾಶ್ಮೀರದಲ್ಲಿಯೂ ಭಾರತ ಮಾತಾ ಕೀ ಜೈ ಇದೆ. ರಷ್ಯಾ-ಉಕ್ರೇನ್ ಮಧ್ಯೆಯೂ ಘೋಷಣೆ ಮೊಳಗುತ್ತಿದೆ. ರಷ್ಯಾ-ಉಕ್ರೇನ್ ಯುದ್ಧದಲ್ಲಿ ತ್ರಿವರ್ಣ ಧ್ವಜ ಕಂಡಾಗ ಯುದ್ಧ ನಿಂತಿತ್ತು. ಪಾಕಿಸ್ತಾನದ ಲೋಕಸಭೆಯಲ್ಲಿ ಭಾರತದ ವಿದೇಶಾಂಗ ನೀತಿ ಹೊಗಳಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಖರ್ಗೆ ಅಧ್ಯಕ್ಷರಾದ ಮೇಲೆ ಸಿದ್ದರಾಮಯ್ಯಗೆ ಸೀಟ್ ಇಲ್ಲ: ನಳಿನ್ ಕುಮಾರ್ ಕಟೀಲ್