ಹುಬ್ಬಳ್ಳಿ : ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಸಿಲಿಂಡರ್ ಬೆಲೆ ಇಳಿಸಿದ್ದು ಚುನಾವಣೆ ಗಿಮಿಕ್ ಅಲ್ವಾ..? ಕಾಂಗ್ರೆಸ್ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿಯೇ ಗ್ಯಾರೆಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ತನ್ನ ಬಜೆಟ್ನಲ್ಲೂ ಗ್ಯಾರಂಟಿಗಳ ಬಗ್ಗೆ ಘೋಷಣೆ ಮಾಡಿದ್ದರು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಗೃಹಲಕ್ಷ್ಮೀ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಸುಮಾರು 1.20 ಕೋಟಿ ಮಹಿಳೆಯರು ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇದನ್ನು ಗಿಮಿಕ್ ಅನ್ನೋದು ಸರಿಯಲ್ಲ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೂ ಅವರು ಸರ್ಕಾರಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮ ಮಾಡಿದ್ದರು. ಅಲ್ಲದೆ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮಾವೇಶ ಮಾಡಿದ್ದರು. ಅದು ಗಿಮಿಕ್ ಅಲ್ವಾ. ಈ ರೀತಿ ಗಿಮಿಕ್ ಅನ್ನೋದನ್ನು ಬಿಟ್ಟು ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಸ್ವಾಗತ ಮಾಡಲಿ, ಕೇವಲ ಟೀಕೆ ಮಾಡೋದಲ್ಲ ಎಂದು ವಾಗ್ದಾಳಿ ನಡೆಸಿದರು.
ಟೀಕೆ ಮಾಡುವ ಮುಂಚೆ ನಿಮ್ಮ ಪಕ್ಷದ ಪರಿಸ್ಥಿತಿ ಏನಿದೆ ಎಂಬುದನ್ನು ತಿಳಿದುಕೊಳ್ಳಿ. ವಿಧಾನಸಭೆ, ವಿಧಾನ ಪರಿಷತ್ನಲ್ಲಿ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡಲಾಗಿಲ್ಲ. ಈಗ ಗ್ಯಾರಂಟಿ ಯೋಜನೆಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಯಶಸ್ಸು ಕಾಣುತ್ತಿರುವುದನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗೆ ಆದರೆ ನಮ್ಮ ಗತಿ ಏನು ಎಂಬ ಭಯ ಬಿಜೆಪಿಯವರಿಗೆ ಶುರುವಾಗಿದೆ. ಹಾಗಾಗಿ ಏನಾದರೊಂದು ಮಾತನಾಡಬೇಕು ಎಂದು ಅವರು ಮಾತನಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಶೆಟ್ಟರ್ ಹೇಳಿದರು.
ಕ್ಲಬ್, ಬಾರ್ಗಳಿಗೆ ರಾತ್ರಿ ಇಡೀ ಪರವಾನಿಗೆ ನೀಡಲಾಗಿದೆ ಎಂಬ ವಿಚಾರವಾಗಿ ಮಾತನಾಡಿ, ಸಾಮಾನ್ಯವಾಗಿ ಇರುವ ಸಮಯವನ್ನೇ ಈಗಲೂ ಮುಂದುವರಿಸಲಾಗಿದೆ. ಟೀಕೆ ಮಾಡುವ ಸಲುವಾಗಿ ಹೀಗೆಲ್ಲ ಹೇಳಿದರೆ ಹೇಗೆ..? ನಿಮ್ಮ ಸರ್ಕಾರದಲ್ಲಿ ನಡೆದಿಲ್ವಾ ಹೀಗೆಲ್ಲ..? ಹಿಂದೆ ಬಿಜೆಪಿ ಸರ್ಕಾರದ ಅವ್ಯವಸ್ಥೆಯನ್ನು ಎಲ್ಲಿಲ್ಲಿ ಹೇಳಬೇಕಿದೆಯೋ ಅಲ್ಲಿ ಹೇಳಿದ್ದೀವಿ. ಅವತ್ತು ಮಾಡಿದ ತಪ್ಪನ್ನು ಇವತ್ತು ಸಹ ಹೇಳಲು ಧೈರ್ಯ ಇದೆ. ಕೊನೆಯ ಮೂರ್ನಾಲ್ಕು ತಿಂಗಳಲ್ಲಿ ದೊಡ್ಡ ದೊಡ್ಡ ಯೋಜನೆಗಳನ್ನು ಮಂಜೂರು ಮಾಡಿದ್ರು, ಟೆಂಡರ್ ಕರೆದರು. ಅದಕ್ಕೆ ಹಣಕಾಸು ಇಲಾಖೆಯ ಒಪ್ಪಿಗೆನೇ ಇರಲಿಲ್ಲ. ಬಳಿಕ ಸಿದ್ದರಾಮಯ್ಯ ಅವರು ಎಲ್ಲಾ ರೀತಿಯಲ್ಲಿ ಲೆಕ್ಕಾಚಾರ ಮಾಡಿ 14ನೇ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರೊಂದಿಗೆ ವೈಯಕ್ತಿಕವಾಗಿ ಚರ್ಚೆ ಮಾಡಿಲ್ಲ. ಚರ್ಚೆ ಮಾಡದೇ ಅವರ ನಿರ್ಧಾರ ನಾವು ಹೇಳೋಕೆ ಸಾಧ್ಯ ಇಲ್ಲ. ಇಡೀ ರಾಜ್ಯದಲ್ಲಿ ಇದೆ ಪರಿಸ್ಥಿತಿ ಇದೆ. ಅವರೊಂದಿಗೆ ಮಾತುಕತೆ ಮಾಡಿ ನೋಡೋಣ. ಬಿಜೆಪಿ ಅಧೋಗತಿಗೆ ಹೋಗ್ತಾ ಇದೆ. ಅಸ್ತಿತ್ವ ಕಳೆದುಕೊಳ್ಳುವಂತಾಗಿದೆ. ಚುನಾವಣೆಯಲ್ಲಿ ಸಾಕಷ್ಟು ಬಾರಿ ಸೋತಿದ್ದೇವೆ. ಆದರೆ ಈ ರೀತಿ ಸ್ಮಶಾನ ಮೌನ ಇರಲಿಲ್ಲ. ಮುನೇನಕೊಪ್ಪ ಅವರಿಗೆ ಇಡಿ ಮೂಲಕ ಹೆದರಿಸ್ತಾ ಇದ್ದಾರಾ ಅನ್ನೋ ಪ್ರಶ್ನೆಗೆ ಮಾಹಿತಿ ಇಲ್ಲಾ ಎಂದು ಶೆಟ್ಟರ್ ತಿಳಿಸಿದರು.
ಇದನ್ನೂ ಓದಿ : ಬಿಜೆಪಿ ನಾಯಕರು ಕಾಂಗ್ರೆಸ್ ಸೇರುವ ಬಗ್ಗೆ ನನಗೆ ಮಾಹಿತಿ ಇದೆ: ಆರ್ ಬಿ ತಿಮ್ಮಾಪುರ