ಧಾರವಾಡ: ಕೊಳಚೆ ಪ್ರದೇಶದಿಂದ ಬರುತ್ತಿರುವ ನೀರಿನ ನೊರೆ ಕಂಡು ಆತಂಕಗೊಂಡ ಗ್ರಾಮಸ್ಥರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿರುವ ಘಟನೆ ಧಾರವಾಡ ಹೊರವಲಯದ ಸಾಧುನವರ ಎಸ್ಟೇಟ್ ಬಡಾವಣೆಯಲ್ಲಿ ಕಂಡುಬಂದಿದೆ.
ನೂರಕ್ಕೂ ಹೆಚ್ಚು ಮನೆಗಳ ಮೇಲೆ ಹಾರಿ ಬರುವ ನೊರೆಯಿಂದ ಅಲ್ಲಿನ ಜನ ಭಯಭೀತರಾಗಿದ್ದಾರೆ. ಧಾರವಾಡ ನಗರದ ಅರ್ಧ ಭಾಗದ ಚರಂಡಿ ನೀರು ಇಲ್ಲಿಗೆ ಹರಿದು ಬರುತ್ತಿದ್ದು, ನೊರೆಯ ಭಯಕ್ಕೆ ಜನ ಮನೆಗಳ ಬಾಗಿಲು ಹಾಕಿಕೊಂಡು ಒಳಗೆ ಕುಳಿತುಕೊಳ್ಳುವಂತಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಭೇಟಿ ನೀಡಿ ಜನರ ಸಮಸ್ಯೆ ವಿಚಾರಿಸಿದರು. ಬಳಿಕ ಮಾತನಾಡಿದ ಅವರು, "ಇಲ್ಲಿ ನೊರೆ ಸಮಸ್ಯೆ ಬಗ್ಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆ ಜಿಲ್ಲಾಧಿಕಾರಿ ಸಮೇತ ವೀಕ್ಷಣೆಗೆ ಬಂದಿದ್ದೇವೆ. ನೊರೆ ಬರೋದಕ್ಕೆ ಕಾರಣ ಏನು ಎಂದು ತಿಳಿಯಬೇಕಿದೆ. ಅದಕ್ಕಾಗಿ ನೀರನ್ನು ಪರೀಕ್ಷೆಗೆ ಕಳುಹಿಸುತ್ತೇವೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ನೀರಿನ ಮಾದರಿ ಪಡೆದಿದ್ದಾರೆ. ವರದಿ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಸದ್ಯಕ್ಕೆ ತುರ್ತಾಗಿ ಆಗಬೇಕಿರುವ ಪರಿಹಾರ ಮಾಡುತ್ತೇವೆ. ಮುಂದೆ ಸಮಸ್ಯೆಯಾಗದಂತೆ ಶಾಶ್ವತ ಪರಿಹಾರಕ್ಕೂ ಚಿಂತನೆ ನಡೆದಿದೆ" ಎಂದರು.
ಇದನ್ನೂ ಓದಿ : ಸ್ಮಶಾನ ಭೂಮಿ ನೀಡಲು ಒತ್ತಾಯ.. ಮೈಮೇಲೆ ಕೊಳಚೆ ನೀರು ಸುರಿದುಕೊಂಡು ಪ್ರತಿಭಟಿಸಿದ ಮಹಿಳೆ: ವಿಡಿಯೋ ವೈರಲ್
"ಸಾಧುನವರ ಎಸ್ಟೇಟ್, ಗುರುನಗರ, ಹಿರೇಮಠ ಲೇಔಟ್, ಪಾಟೀಲ ಲೇಔಟ್ ಮೇಲೆ ನೊರೆ ನೀರು ಪರಿಣಾಮ ಬೀರಿದೆ. ರಾಸಾಯನಿಕದಿಂದಲೇ ನೊರೆ ಬರುತ್ತಿದೆ ಎಂದು ಜನರು ಆರೋಪಿಸಿದ್ದಾರೆ. ನೊರೆ ಮೈಮೇಲೆ ಬಂದು ಬಿದ್ರೆ ರೋಗ ಬರುತ್ತವೆ ಎನ್ನುವ ಭೀತಿಯಲ್ಲಿದ್ದಾರೆ. ವಾಯು ವಿಹಾರಕ್ಕೆ ಬರಲು ಸಹ ಸ್ಥಳೀಯರು ಹೆದರುತ್ತಿದ್ದಾರೆ. ಚಿಕ್ಕಮಲ್ಲಿಗವಾಡ ಗ್ರಾ.ಪಂಗೆ ಬರುವ ಬಡಾವಣೆ ಇದಾಗಿದ್ದು, ನೊರೆ ಬರುತ್ತಿರುವ ಹಳ್ಳದ ನೀರು ನಗರದ್ದಾಗಿದೆ" ಎಂದು ಸಮಸ್ಯೆ ಪರಿಹರಿಸದ ಗ್ರಾ ಪಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ಮಳೆ ಅಬ್ಬರ, ನೀರಿನಲ್ಲಿ ಕೊಚ್ಚಿಹೋದ ಬೈಕ್ಗಳು.. ಅವ್ಯವಸ್ಥೆಗೆ ಬೇಸತ್ತು ಯುವಕ ಹೀಗ್ ಮಾಡೋದಾ!
ಗ್ರಾಪಂ ಸದಸ್ಯೆಯನ್ನು ತರಾಟೆಗೆ ತೆಗೆದುಕೊಂಡ ಜನ : ಇದೇ ವೇಳೆ ಧಾರವಾಡದಲ್ಲಿ ಸ್ಥಳೀಯ ಸಮಸ್ಯೆಗೆ ಸ್ಪಂದಿಸದ ಗ್ರಾ ಪಂ ಸದಸ್ಯೆಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡ ಘಟನೆ ನಡೆಯಿತು. ಗ್ರಾ ಪಂ ಸದಸ್ಯೆ ಪವಿತ್ರಾ ತಳವಾರ ಎಂಬುವರನ್ನು ಹಿರಿಯ ನಾಗರಿಕರು ತರಾಟೆಗೆ ತೆಗೆದುಕೊಂಡರು. ಕೊಳಚೆ ನೀರಿನ ಹಳ್ಳದಿಂದ ಕೆಮಿಕಲ್ ಮಿಶ್ರಿತ ನೊರೆ ಬರುತ್ತಿದ್ದ ಸ್ಥಳಕ್ಕೆ ಸಂತೋಷ್ ಲಾಡ್ ಭೇಟಿ ನೀಡುವ ಹಿನ್ನೆಲೆ ಸ್ಥಳಕ್ಕೆ ಗ್ರಾ.ಪಂ ಸದಸ್ಯೆ ಸಚಿವರ ಭೇಟಿಗೂ ಮುಂಚಿತವಾಗಿಯೇ ಬಂದಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರು ಏಕವಚನದಲ್ಲೇ ತರಾಟೆ ತೆಗೆದುಕೊಂಡ ಹಿನ್ನೆಲೆ ಗ್ರಾ ಪಂ ಸದಸ್ಯೆ ಕಣ್ಣೀರು ಹಾಕಿದರು.
ಇದನ್ನೂ ಓದಿ : ಸ್ವಂತ ಆಡಳಿತ ಪಕ್ಷದ ವಿರುದ್ಧವೇ ಆಕ್ರೋಶ.. ಕೊಳಚೆ ನೀರಿನಲ್ಲಿ ಕುಳಿತು ಶಾಸಕನ ಪ್ರತಿಭಟನೆ