ಧಾರವಾಡ : ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಹೂವು ಬೆಳೆಗಾರರಿಗೆ ಸರ್ಕಾರ ಘೋಷಿಸಿದ್ದ ಸಹಾಯಧನ ಇನ್ನೂ ದೊರೆತಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಕೊರೊನಾ ಲಾಕ್ಡೌನ್ನಿಂದ ಶುಭ ಸಮಾರಂಭಗಳು ಸ್ಥಗಿತಗೊಂಡು ಹೂವಿಗೆ ಬೇಡಿಕೆ ಕಡಿಮೆಯಾಗಿತ್ತು. ಇದರಿಂದ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ, ಸರ್ಕಾರ ಸಹಾಯಧನ ಘೋಷಿಸಿತ್ತು. ಆದರೆ, ಸರ್ಕಾರದ ಸಹಾಯಧನ ಇನ್ನೂ ನಮಗೆ ತಲುಪಿಲ್ಲ ಎಂದು ಧಾರವಾಡ ತಾಲೂಕಿನ ಕುರುಬಗಟ್ಟಿ ಗ್ರಾಮದ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುರುಬಗಟ್ಟಿ ಗ್ರಾಮದ ರೈತರು ಹೆಚ್ಚಾಗಿ ಹೂವು ಬೆಳೆಯುತ್ತಾರೆ. ಇಲ್ಲಿ ಸುಮಾರು 400 ರಿಂದ 500 ಹೆಕ್ಟೇರ್ ಪ್ರದೇಶದಲ್ಲಿ ಹೂವು ಬೆಳೆಯಲಾಗುತ್ತದೆ. ಲಾಕ್‌ಡೌನ್ ಸಂದರ್ಭದಲ್ಲಿ ಹೂವು ಕೊಳ್ಳುವವರಿಲ್ಲದೆ ಹೊಲದಲ್ಲೇ ಉದುರಿ ಹೋಗಿ ರೈತರಿಗೆ ನಷ್ಟ ಸಂಭವಿಸಿತ್ತು. ಸರ್ಕಾರ ಪ್ರತಿ ಬೆಳೆಗಾರರಿಗೆ 25 ಸಾವಿರ ರೂ. ಪರಿಹಾರ ಧನ ಘೋಷನೆ ಮಾಡಿದ ಹಿನ್ನೆಲೆ ಕುರುಬಗಟ್ಟಿ ಗ್ರಾಮದ ರೈತರು ಕೂಡ ಅರ್ಜಿ ಸಲ್ಲಿಸಿದ್ದರು.
ಆದರೆ, ಈ ಪೈಕಿ ಕೆಲವರಿಗೆ ಪರಿಹಾರದ ಹಣ ಬಂದಿದೆ. ಇನ್ನೂ 300ಕ್ಕೂ ಅಧಿಕ ಮಂದಿಗೆ ಪರಿಹಾರ ಸಿಕ್ಕಿಲ್ಲ. ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ದರ್ಶಕ ಆ್ಯಪ್ ನೋಡಿ ಕೆಲವರನ್ನು ಆಯ್ಕೆ ಮಾಡಿದ್ದೇವೆ ಎಂದು ಹೇಳುತ್ತಿರುವುದಾಗಿ ರೈತರು ಆರೋಪಿಸಿದ್ದಾರೆ.