ಹುಬ್ಬಳ್ಳಿ: ಕಳಸಾ ಬಂಡೂರಿ ಯೋಜನೆಗಾಗಿ ಉತ್ತರ ಕರ್ನಾಟಕ ಭಾಗದ ಜನರು ಜೀವದ ಹಂಗು ತೊರೆದು ಹೋರಾಟ ಮಾಡಿದ್ದಾರೆ. ಪೊಲೀಸರಿಂದ ಲಾಠಿ ಏಟು ಕೂಡ ಬಿದ್ದಿದೆ. ಆದರೆ ದಶಕಗಳ ಹೋರಾಟದಲ್ಲಿ ಭಾಗಿಯಾಗಿದ್ದ ರೈತರ ಮೇಲೆ ನೂರಾರು ಪ್ರಕರಣಗಳು ದಾಖಲಾಗಿದ್ದು, ಈಗಲೂ ಕೋರ್ಟ್ ಕಚೇರಿಗೆ ಅಲೆಯುವ ಸ್ಥಿತಿ ಇದೆ.
ಇಂದು 41ನೇ ರೈತ ಹುತಾತ್ಮ ದಿನ. ಇದಕ್ಕೆ ಕಾರಣವಾಗಿದ್ದು, ನವಲಗುಂದ ನರಗುಂದ ರೈತ ಬಂಡಾಯ. ಆದರೆ, ಅದರಂತೆ ಈ ಭಾಗದ ಜನರ ಭಾವನಾತ್ಮಕ ಹೋರಾಟ ಕಳಸಾ ಬಂಡೂರಿಗಾಗಿ ಸಾಕಷ್ಟು ರೈತರ ಜೀವದ ಹಂಗು ತೊರೆದು ಹೋರಾಟ ಮಾಡಿದ್ದಾರೆ. ಉತ್ತರ ಕರ್ನಾಟಕದ ರೈತರ ಹಾಗೂ ಸಾರ್ವಜನಿಕರ ಬಹುದೊಡ್ಡ ಹೋರಾಟ ಎಂದೇ ಖ್ಯಾತಿ ಪಡೆದ ಮಹದಾಯಿ ಹೋರಾಟದಲ್ಲಿ ಭಾಗಿಯಾದ ರೈತರ ಮೇಲೆ ಹಾಕಿರುವ ಕೇಸ್ ಇದುವರೆಗೂ ಹಿಂಪಡೆದಿಲ್ಲ.
ಹೌದು, ನಿರಂತರ ಹೋರಾಟದ ಫಲವಾಗಿ ಮಹದಾಯಿ ನ್ಯಾಯಾಧೀಕರಣದ ತೀರ್ಪು ಬಂದಿದೆ. ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ. ರಾಜ್ಯ ಸರ್ಕಾರ 1,600 ಕೋಟಿ ರೂಪಾಯಿಗಳನ್ನು ಕಾಮಗಾರಿಗೆ ತೆಗೆದಿಟ್ಟಿದೆ. ಆದರೂ ಕೂಡ ರೈತರ ಮುಖಂಡರ ಮೇಲೆ ಮತ್ತು ಸಾಮಾನ್ಯ ರೈತರ ಮೇಲೆ ಹಾಕಿರುವ ಕೋರ್ಟ್ ಕೇಸ್ ಮಾತ್ರ ಸರ್ಕಾರ ಈವರೆಗೂ ಹಿಂಪಡೆದಿಲ್ಲ. ಹಲವಾರು ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ಮಾಡಿ ಭರವಸೆ ನೀಡಿದ ಸರ್ಕಾರ ಹಾಗೂ ಜನಪ್ರತಿನಿಧಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ ವಿನಃ ಕೇಸ್ ಹಿಂಪಡೆಯುವಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.
ಇದನ್ನೂ ಓದಿ: ಆ.2ರಿಂದ ಗುಲಬರ್ಗಾ ವಿವಿ ಪರೀಕ್ಷೆ ಆರಂಭ.. 2 ಮತ್ತು 4ನೇ ಸೆಮಿಸ್ಟರ್ ಪದವಿ ವಿದ್ಯಾರ್ಥಿಗಳು ಪ್ರಮೋಟ್
ಉತ್ತರ ಕರ್ನಾಟಕ ಭಾಗದ ನವಲಗುಂದ, ನರಗುಂದ ಹಾಗೂ ಹುಬ್ಬಳ್ಳಿಯ ರೈತರು ಸೇರಿದಂತೆ ಜಿಲ್ಲೆಯ ಬಹುತೇಕ ರೈತರ ಮೇಲೆ ಐವತ್ತಕ್ಕೂ ಅಧಿಕ ಕೇಸ್ಗಳಿವೆ. ಈ ಹಿಂದೆ ಕೆಲವು ಕೇಸ್ಗಳನ್ನು ಹಿಂಪಡೆಯಲಾಗಿದೆ. ಆದರೆ, ಉಳಿದ ಸುಮಾರು ಐವತ್ತಕ್ಕೂ ಹೆಚ್ಚು ಕೇಸ್ಗಳನ್ನು ಈವರೆಗೂ ಹಿಂಪಡೆದಿಲ್ಲ. ಸಾರ್ವಜನಿಕ ಹೋರಾಟಕ್ಕೆ ಮನೆಯ ಕೆಲಸ ಕಾರ್ಯವನ್ನು ಬಿಟ್ಟು ಹೋರಾಟ ನಡೆಸುವ ಹೋರಾಟಗಾರರು ಈಗ ಕೋರ್ಟ್ ಕಚೇರಿ ಅಲೆಯುವಂತಾಗಿದೆ.