ಧಾರವಾಡ: ಮುಂಗಾರು ಮಳೆ ಕೈಕೊಟ್ಟಿರುವುದರಿಂದ ರಾಜ್ಯದಲ್ಲಿ ಬರದ ಛಾಯೆ ಆವರಿಸಿದೆ. ಇದರಿಂದಾಗಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರ ನಡುವೆಯೇ ಅನ್ನದಾತರಿಗೆ ಧಾರವಾಡ ಕೆಎಂಎಫ್ ಗಾಯದ ಮೇಲೆ ಬರೆ ಎಳೆದಿದೆ. ಕೆಎಂಎಫ್ ಏಕಾಏಕಿ ಹಾಲಿನ ದರ ಕಡಿತಗೊಳಿಸಿದ್ದು, ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
ಪ್ರತಿ ಲೀಟರ್ ಹಾಲಿಗೆ ಸರ್ಕಾರ ಪ್ರೋತ್ಸಾಹ ಧನ ನೀಡುತ್ತಿದೆ. ಹೀಗಿರುವಾಗ, ಧಾರವಾಡ ಹಾಲು ಒಕ್ಕೂಟ ಇದೀಗ ಏಕಪಕ್ಷೀಯ ಹಾಲಿನ ದರ ಕಡಿತಗೊಳಿಸುವ ನಿರ್ಣಯ ಕೈಗೊಂಡಿದೆ. ಈ ಮೂಲಕ ಪ್ರತಿ ಲೀಟರ್ ಹಾಲಿಗೆ 2 ರೂ. ಇಳಿಸಲು ಮುಂದಾಗಿದೆ. ಧಾರವಾಡ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿ ಹೊಂದಿರುವ ಈ ಒಕ್ಕೂಟ ಸದ್ಯ ಆರ್ಥಿಕವಾಗಿ ನಷ್ಟದಲ್ಲಿದೆ ಎಂದು ಹೇಳಲಾಗಿದೆ. ಈ ನಷ್ಟವನ್ನು ತುಂಬಲು ಒಕ್ಕೂಟ ಈಗ ರೈತರಿಂದ ಖರೀದಿಸುವ ಹಾಲಿನ ಬೆಲೆಯಲ್ಲಿ 2 ರೂಪಾಯಿ ಕಡಿತ ಮಾಡಲು ಚಿಂತಿಸಿದೆ. ಅಕ್ಟೋಬರ್ 19ರಂದು ನಡೆದ ಒಕ್ಕೂಟ ಸಭೆಯಲ್ಲಿ ಹಾಲಿನ ದರ ಇಳಿಕೆ ಸಂಬಂಧ ನಿರ್ಣಯ ಕೈಗೊಳ್ಳಲಾಗಿದೆ. ಈ ಸಂಬಂಧ ಆಕ್ರೋಶ ವ್ಯಕ್ತಪಡಿಸಿರುವ ರೈತರು ಒಕ್ಕೂಟದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ರೈತ ಬಸವರಾಜ್ ದಿಂಡೂರು, ಧಾರವಾಡ ಹಾಲು ಒಕ್ಕೂಟವು ರೈತರಿಂದ ಖರೀದಿಸುವ ಹಾಲಿನ ದರದಲ್ಲಿ 2 ರೂಪಾಯಿಗಳನ್ನು ಕಡಿಮೆ ಮಾಡಿದ್ದಾರೆ. ಈ ಸಂಬಂಧ ನಾವು ಗದಗ ಸೇರಿದಂತೆ ವಿವಿದೆಡೆ ಮುಷ್ಕರ ನಡೆಸಿದ್ದೇವು. ಈ ಸಂಬಂಧ ಒಕ್ಕೂಟವು ನಮ್ಮ ಪ್ರತಿಭಟನೆಗೆ ಮಣಿದು ಹಳೆ ದರವನ್ನು ಅಕ್ಟೋಬರ್ 31ರವರೆಗೆ ಮುಂದುವರೆಸಿತ್ತು. ನವೆಂಬರ್ನಲ್ಲಿ ಹಾಲಿನ ಖರೀದಿ ದರವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ.
ರಾಜ್ಯಾದ್ಯಂತ ಬರಗಾಲ ಇದ್ದು, ದನಕರುಗಳಿಗೆ ಮೇವು ಲಭ್ಯವಾಗುತ್ತಿಲ್ಲ. ಚರ್ಮಗಂಟು ರೋಗ ಬಂದು ಅನೇಕ ರೈತರು ತಮ್ಮ ಹಸುಗಳನ್ನು ಕಳೆದುಕೊಂಡರು. ಇದೀಗ ಒಕ್ಕೂಟವು ಹಾಲಿನ ಖರೀದಿ ದರವನ್ನು ಕಡಿಮೆ ಮಾಡುತ್ತಿರುವುದು ಸರಿಯಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಹೇಳಿದರು.
ಹಾಲು ಒಕ್ಕೂಟ ಮಾಜಿ ಅಧ್ಯಕ್ಷ ನೀಲಕಂಠ ಅಸೂಟಿ ಮಾತನಾಡಿ, ಹಾಲಿನ ದರ ಕಡಿಮೆ ಮಾಡುತ್ತಿರುವುದು ಸರಿಯಲ್ಲ. ರಾಜ್ಯದಲ್ಲಿ ಬರಗಾಲ ಇದೆ. ದನಗಳಿಗೆ ಹುಲ್ಲಿಲ್ಲ ಮೇವಿಲ್ಲ. ಇದರಿಂದಾಗಿ ರೈತರು ಹೈರಾಣಾಗಿದ್ದಾರೆ.ಹಾಗಾಗಿ ಹಾಲಿನ ಖರೀದಿ ದರವನ್ನು ಇಳಿಸಬಾರದು ಎಂದು ಒತ್ತಾಯಿಸಿದ್ದೇನೆ.
ಸಭೆ ವೇಳೆ ಸಭಾ ತ್ಯಾಗ ಮಾಡಿ ಹೊರ ನಡೆದೆ. ಆದರೂ ಸಭೆಯನ್ನು ದರ ಇಳಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಈ ಸಂಬಂಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂಬಂಧ ಮನವಿ ಸಲ್ಲಿಸಲು ವಿವಿಧ ಹಾಲು ಉತ್ಪಾದಕರ ಒಕ್ಕೂಟದ ಸದಸ್ಯರು ಆಗಮಿಸಿದ್ದಾರೆ ಎಂದು ತಿಳಿಸಿದರು. ಅಧ್ಯಕ್ಷರ ಸರ್ವಾಧಿಕಾರ ಧೋರಣೆಯಂತಾಗಿದೆ. ಸಭೆಯಲ್ಲಿ ಏಕರೂಪದ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಇದರಿಂದ ಬೇಸತ್ತು ರೈತರು ಹಸುಗಳನ್ನು ಮಾರಾಟ ಮಾಡುತ್ತಾರೆ. ಆದ್ದರಿಂದ ಈ ನಿರ್ಣಯನ್ನು ಕೈಗೊಳ್ಳಬಾರದು ಎಂದು ಹೇಳಿದರು.ನಿರ್ದೇಶಕರ ವಿರೋಧದ ನಡುವೆಯೂ ಒಕ್ಕೂಟದ ಸಭೆಯಲ್ಲಿ ದರ ಕಡಿತ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಇಂದು ಮಧ್ಯಾಹ್ನ ಹಾಸನಾಂಬೆ ದೇವಸ್ಥಾನದ ಬಾಗಿಲು ಓಪನ್; ನಾಳೆಯಿಂದ ಭಕ್ತರಿಗೆ ದರ್ಶನಭಾಗ್ಯ