ಹುಬ್ಬಳ್ಳಿ: ರಸಗೊಬ್ಬರ ದರವನ್ನು ದುಪ್ಪಟ್ಟು ಮಾಡಿ ರೈತರ ಕೆಂಗಣ್ಣಿಗೆ ಗುರಿಯಾಗಿದ್ದ ಸರ್ಕಾರ, ಇದೀಗ ಬಿತ್ತನೆ ಬೀಜಗಳ ದರವನ್ನು ಹೆಚ್ಚಿಸಿ ಅನ್ನದಾತನ ಆಕ್ರೋಶಕ್ಕೆ ಗುರಿಯಾಗಿದೆ. ಬಿತ್ತನೆ ಬೀಜ ಬೆಲೆ ಹೆಚ್ಚಳ ಕೋವಿಡ್ ಸಂಕಷ್ಟದ ಸಮಯದಲ್ಲಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮುಂಗಾರು ಆರಂಭಕ್ಕೂ ಮುನ್ನವೇ ಧಾರವಾಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ, ಕೊರೊನಾ ಆತಂಕದ ನಡುವೆಯೂ ಹೊಲದತ್ತ ಹೆಜ್ಜೆ ಹಾಕಿರುವ ರೈತರು ಬಿತ್ತನೆಗೆ ಸಿದ್ದರಾಗಿದ್ದಾರೆ. ಮೇ 26 ರಿಂದ ಜಿಲ್ಲೆಯ ರೈತ ಕೇಂದ್ರಗಳ ಮೂಲಕ ಬಿತ್ತನೆ ಬೀಜ ವಿತರಣೆ ಪ್ರಾರಂಭವಾಗಿದ್ದು, ಬೀಜ ಖರೀದಿಗೆ ಹೋದ ರೈತರ ಜೇಬಿಗೆ ಕತ್ತರಿ ಬೀಳುತ್ತಿದೆ.
ಕಳೆದ ವರ್ಷ ಇದ್ದ ಬೀಜದ ಬೆಲೆಯಲ್ಲಿ ಈಗ ಹೆಚ್ಚಳವಾಗಿದೆ. ಬಿತ್ತನೆ ಬೀಜದ ಬೆಲೆ ಕೇಳಿ ರೈತರು ಶಾಕ್ ಆಗಿದ್ದಾರೆ. ಸೋಯಾಬಿನ್ ಬೀಜ ಕ್ವಿಂಟಾಲ್ಗೆ 6,700 ರಿಂದ 10,400 ರೂಪಾಯಿವೆರೆಗೆ ಇದೆ. ಸರ್ಕಾರದ ಸಹಾಯಧನ 750 ಸೇರಿ 30 ಕೆ.ಜಿಯ ಪ್ಯಾಕೆಟ್ಗೆ 2,010 ರೂಪಾಯಿಗಳಾಗಿತ್ತು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ 885 ರೂಪಾಯಿಗೆ ಪ್ಯಾಕೆಟ್ ನೀಡಲಾಗುತ್ತಿತ್ತು. ಆದರೆ, ಈ ವರ್ಷ ಸೋಯಾಬಿನ್ 30 ಕೆ.ಜಿ ಪ್ಯಾಕೇಟ್ಗೆ 2,370 ರೂಪಾಯಿ ಕೊಡಬೇಕಾಗಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಧಾರವಾಡ ಜಿಲ್ಲೆಯಲ್ಲಿ 46 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬಿನ್ ಬಿತ್ತನೆ ಮಾಡಲಾಗುತ್ತಿದೆ. ಬೆಲೆ ಹೆಚ್ಚಳ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ಹೆಸರು ಕಾಳು ಕ್ವಿಂಟಾಲ್ಗೆ 9,750 ರಿಂದ 12,400 ರೂ., ಜೋಳ ಕ್ವಿಂಟಾಲ್ಗೆ 6,500 ರಿಂದ 7,400 ರೂ. ಆಗಿದೆ. ಶೇಂಗಾ ಕ್ವಿಂಟಾಲ್ಗೆ 7,500 ರಿಂದ 8,300 ರೂ., ತೊಗರಿ 7,500 ರಿಂದ 10,400 ರೂಪಾಯಿಗೆ ಹೆಚ್ಚಳವಾಗಿದೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೆ ರಸಗೊಬ್ಬರಗಳ ಬೆಲೆ ಹೆಚ್ಚಿಸಿ ಸರ್ಕಾರ ರೈತರ ಕೆಂಗಣ್ಣಿಗೆ ಗುರಿಯಾಗಿತ್ತು. ಬಳಿಕ ರೈತರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಸಬ್ಸಿಡಿ ಹೆಚ್ಚಿಸಿ ಕಳೆದ ವರ್ಷದ ಬೆಲೆಯಲ್ಲೇ ರಸಗೊಬ್ಬರ ನೀಡುವುದಾಗಿ ಘೋಷಣೆ ಮಾಡಿತ್ತು. ಇದಾದ, ಬೆನ್ನಲ್ಲೇ ಈಗ ಬಿತ್ತನೆ ಬೀಜಗಳ ಬೆಲೆ ಹೆಚ್ಚಳ ಮಾಡಿರುವುದು ರೈತರನ್ನು ಮತ್ತೆ ಸಂಕಷ್ಟಕ್ಕೀಡು ಮಾಡಿದೆ.
ಇದನ್ನೂ ಓದಿ: ಈ ಟಿವಿ ಭಾರತ ಇಂಪ್ಯಾಕ್ಟ್: ಬಡ ಕರುಳು ಬಳ್ಳಿಗಳಿಗೆ ಮಿಡಿದ ಹುಬ್ಬಳ್ಳಿ ಹೃದಯಗಳು